ವಕ್ಫ್ ವಿವಾದ: ಜನರ ದಿಕ್ಕು ತಪ್ಪಿಸೋ ಅಭಿಯಾನ ಶುರು ಮಾಡಿದೆ ಕಾಂಗ್ರೆಸ್ – ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ ನವೆಂಬರ್‌ 09: ವಕ್ಫ್ ವಿವಾದದಲ್ಲಿ ಕಾಂಗ್ರೆಸ್ ಪಕ್ಷ ಜನರ ದಿಕ್ಕು ತಪ್ಪಿಸುವ ಅಭಿಯಾನ ಶುರು ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ವಿವಾದ, ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವುದು, ಮಿಸ್ ಗೈಡ್ ಮಾಡುವುದು ಕಾಂಗ್ರೆಸ್ ಸಂಸ್ಕೃತಿ ಆಗಿಬಿಟ್ಟಿದೆ ಎಂದು ಹರಿಹಾಯ್ದಿದ್ದಾರೆ.

ಕಾಂಗ್ರೆಸ್ಸಿಗರು ಯಾವತ್ತೂ ಜನರನ್ನು ಮನವರಿಕೆ ಮಾಡುವುದಿಲ್ಲ, ಬರೀ ಗೊಂದಲ ಸೃಷ್ಟಿ ಮಾಡುವುದರಲ್ಲೇ ಇರುತ್ತಾರೆ. ಅದು ಕಾಂಗ್ರೆಸ್ಸಿಗರ ಡಿಎನ್‌ಎಯಲ್ಲಿಯೇ ಬಂದಿದೆ. ಈಗ ವಕ್ಫ್ ವಿಚಾರದಲ್ಲೂ ಕಾಂಗ್ರೆಸ್ ಸರ್ಕಾರದವರು ಜನರಿಗೆ ಗೊಂದಲ ಉಂಟುಮಾಡುತ್ತಿದೆ. ಆದರೆ, ಬಿಜೆಪಿ ಯಾವತ್ತೂ ಸ್ಪಷ್ಟ ನಿಲುವು ತೋರಿದೆ, ವಕ್ಫ್ ಅತಿಕ್ರಮಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ಸಿನವರು ಬುದ್ಧಿ ಇದ್ದು ಮಾಡುತ್ತಿದ್ದಾರೋ? ಬುದ್ಧಿ ಇಲ್ಲದೇ ಮಾಡ್ತಾ ಇದ್ದಾರೋ ಗೊತ್ತಿಲ್ಲ. ಬಿಜೆಪಿ ವಕ್ಫ್ ಆಸ್ತಿ ಸಂರಕ್ಷಣೆ ಮಾಡುತ್ತದೆ ಎನ್ನುತ್ತ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವಕ್ಫ್ ಆಸ್ತಿಯನ್ನು ಸಂರಕ್ಷಿಸುವ ಕೆಲಸವನ್ನು ಬಿಜೆಪಿ (BJP) ಹಿಂದೆಯೂ ಮಾಡಿದೆ, ಮುಂದೆಯೂ ಮಾಡುತ್ತದೆ. ಆದರೆ ವಕ್ಫ್ ಹೆಸರಲ್ಲಿ ಭೂಗಳ್ಳರು ಬಡವರ, ರೈತರ, ಜನಸಾಮಾನ್ಯರ ಆಸ್ತಿ ಕಬಳಿಸಲು ಹೊರಟರೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ಸಿನ ಪ್ರಭಾವಿ ನಾಯಕರೇ ವಕ್ಫ್ ಆಸ್ತಿ ಹೊಡೆದಿದ್ದಾರೆ. ಅನ್ವರ್ ಮಾನಪ್ಪಾಡಿ ವರದಿ ಪ್ರಕಾರ, ಕಾಂಗ್ರೆಸ್ಸಿನ ಅತ್ಯಂತ ಪ್ರಭಾವಿ ನಾಯಕರೇ ವಕ್ಫ್‌ 29,000 ಎಕರೆ ಆಸ್ತಿ ಹೊಡೆದಿದ್ದಾರೆ. ವಿಧಾನ ಪರಿಷತ್ತಿನ ಹಕ್ಕು ಭಾದ್ಯತಾ ಸಮಿತಿ ಸಹ ಮಾನಪ್ಪಾಡಿ ವರದಿ ಪರಿಶೀಲನೆ ಮಾಡಿ ಮತ್ತೊಂದು ವರದಿ ಕೊಟ್ಟಿದೆ. ವಕ್ಫ್ ಆಸ್ತಿ ದುರುಪಯೋಗ ಆಗಿದೆ ಎಂಬ ಅಂಶ ಅದರಲ್ಲಿದೆ ಎಂದು ತಿಳಿಸಿದರು.