ನನ್ನ ಉತ್ತಮ ಆಟಕ್ಕೆ ಕಾರಣ ‘ಅವರೇ’

ಸಂಜು ಸ್ಯಾಮ್ಸನ್ ಈ ಬಾರಿಯ ಟೂರ್ನಿಯಲ್ಲಿ ಸೂಪರ್-8 ಹಂತದ ಬಳಿಕ ಬ್ಯಾಕ್-ಟು-ಬ್ಯಾಕ್ ಪಂದ್ಯಗಳಲ್ಲಿ ಕಣಕ್ಕಿಳಿದರು. ಈ ವೇಳೆ ವೆಸ್ಟ್ ಇಂಡೀಸ್ ವಿರುದ್ಧ 97* ರನ್, ಇಂಗ್ಲೆಂಡ್ ವಿರುದ್ಧ 89 ರನ್ ಹಾಗೂ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 89 ರನ್ ಗಳಿಸಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ ಈ ಮಿಂಚಿನ ಪ್ರದರ್ಶನ ಭಾರತ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.

T20 World Cup 2026:

 ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಹಿಂದಿನ ರೂವಾರಿ ಸಂಜು ಸ್ಯಾಮ್ಸನ್. ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದ ಸ್ಯಾಮ್ಸನ್ ನಿರ್ಣಾಯಕ ಹಂತದಲ್ಲಿ ಕಣಕ್ಕಿಳಿದು ಅಬ್ಬರಿಸುವ ಮೂಲಕ ಟೀಮ್ ಇಂಡಿಯಾಗೆ ಚಾಂಪಿಯನ್ ಪಟ್ಟ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಮುಂಬೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಮ್ಯಾಚ್​ನಲ್ಲಿ 89 ರನ್ ಬಾರಿಸಿದ ಸ್ಯಾಮ್ಸನ್, ಫೈನಲ್​​ನಲ್ಲೂ ನ್ಯೂಝಿಲೆಂಡ್ ವಿರುದ್ಧ ಅಬ್ಬರಿಸಿದರು.

ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 46 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 89 ರನ್ ಸಿಡಿಸಿದರು. ಈ ಸ್ಫೋಟಕ ಇನಿಂಗ್ಸ್ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 255 ರನ್ ಪೇರಿಸಿತು.

ಚಾಂಪಿಯನ್ ಪಟ್ಟದೊಂದಿಗೆ ಸಂಜು ಸ್ಯಾಮ್ಸನ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಈ ಪ್ರಶಸ್ತಿ ಪಡೆದು ಮಾತನಾಡಿದ ಸಂಜು, ನನ್ನ ಈ ಪ್ರದರ್ಶನಕ್ಕೆ ಸಚಿನ್ ತೆಂಡೂಲ್ಕರ್ ಅವರೇ ಕಾರಣ ಎಂದಿದ್ದಾರೆ.

ಸಚಿನ್ ಅವರು ಪಂದ್ಯದ ಮೇಲಿನ ಹಿಡಿತ ಮತ್ತು ಮಾನಸಿಕ ಸ್ಪಷ್ಟತೆಯ ಬಗ್ಗೆ ನನ್ನೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದರು. ಅಷ್ಟೇ ಅಲ್ಲದೆ ಫೈನಲ್ ಪಂದ್ಯದ ಹಿಂದಿನ ರಾತ್ರಿ ಕೂಡ ಸಚಿನ್ ಅವರಿಗೆ ಕರೆ ಮಾಡಿದ್ದೆ. ಈ ವೇಳೆಯೂ ಅವರು ನನಗೆ ಆತ್ಮವಿಶ್ವಾಸ ತುಂಬಿದ್ದರು.

ಕಳೆದ ಎರಡು ತಿಂಗಳುಗಳಿಂದ ನಾನು ಸಚಿನ್ ಸರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಅದರಲ್ಲೂಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ತಂಡದಿಂದ ಹೊರಗಿಟ್ಟಾಗ ಅವರು ನನಗೆ ಮಾನಸಿಕವಾಗಿ ದೃಢವಾಗಿರಲು ಮತ್ತು ಸರಿಯಾದ ಮನಸ್ಥಿತಿ  ಬೆಳೆಸಿಕೊಳ್ಳಲು ಮಾರ್ಗದರ್ಶನ ನೀಡಿದರು.

ಅವರಂತಹ ದಂತಕಥೆಯಿಂದ ಮಾರ್ಗದರ್ಶನ ಪಡೆಯುವುದು ನನಗೆ ಸಿಕ್ಕ ದೊಡ್ಡ ವರ. ಅವರು ನನಗೆ ಪಂದ್ಯದ ಮೇಲಿನ ಹಿಡಿತ ಮತ್ತು ತಯಾರಿಯ ಬಗ್ಗೆ ಸ್ಪಷ್ಟತೆ ನೀಡಿದರು. ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ ಸರಣಿಯ ವೈಫಲ್ಯದ ಬಳಿಕ ನಾನು ಮಾನಸಿಕವಾಗಿ ಕುಗ್ಗಿದ್ದಾಗ ಸಚಿನ್ ಅವರ ಮಾತುಗಳು ನನ್ನಲ್ಲಿ ಮತ್ತೆ ನಂಬಿಕೆ ಮೂಡಿಸಿದವು. ಬೃಹತ್ ಮೊತ್ತವನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು ಕೇವಲ 159 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 96 ರನ್​ಗಳ ಅಮೋಘ ಗೆಲುವಿನೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ನನ್ನಂತಹ ಆಟಗಾರನಿಗೆ ಕ್ರಿಕೆಟ್ ದಂತಕಥೆಯಿಂದ ಸಿಕ್ಕಂತಹ ಮಾರ್ಗದರ್ಶನದಿಂದಾಗಿ ನಾನು ಇಂದು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಸಂಜು ಸ್ಯಾಮ್ಸನ್ ತಿಳಿಸಿದ್ದಾರೆ.