ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್–ಇಸ್ರೇಲ್ ಯುದ್ಧದ ಅಂತ್ಯದ ಕುರಿತು ಮಾತನಾಡಿದ್ದಾರೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್‌ನ ಸುಪ್ರೀಂ ನಾಯಕ ಖಮೇನಿ ಹತ್ಯೆಯಾದ ನಂತರ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆಳವಣಿಗೆಯ ನಡುವೆ ಖಮೇನಿಯ ಪುತ್ರ ಮೊಜ್ತಬಾ ಅವರನ್ನು ಉತ್ತರಾಧಿಕಾರಿಯಾಗಿ ಘೋಷಿಸಲಾಗಿದೆ. ಈ ಯುದ್ಧದಲ್ಲಿ ಉಭಯ ದೇಶಗಳಲ್ಲಿಯೂ ಹೆಚ್ಚಿನ ಸಾವು–ನೋವು ಸಂಭವಿಸಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.

ವಾಷಿಂಗ್ಟನ್, ಮಾರ್ಚ್ 09:
ಇರಾನ್ ಜತೆಗಿನ ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕೆಂಬ ನಿರ್ಧಾರವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಸೇರಿ ತೆಗೆದುಕೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ದಿ ಟೈಮ್ಸ್ ಆಫ್ ಇಸ್ರೇಲ್ಗೆ ನೀಡಿದ್ದ ಸಂದರ್ಶನದಲ್ಲಿ ಟ್ರಂಪ್ ಮಾತನಾಡಿ, ತಾನು ಮತ್ತು ನೆತನ್ಯಾಹು ಇಲ್ಲದೇ ಇದ್ದಿದ್ದರೆ ಇಸ್ಲಾಮಿಕ್ ಗಣರಾಜ್ಯ ಇಸ್ರೇಲ್ ಅನ್ನು ನಾಶಮಾಡುತ್ತಿತ್ತು ಎಂದು ಹೇಳಿದ್ದಾರೆ.

ಇರಾನ್ ಜತೆಗಿನ ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ತಾವು ಮಾತ್ರ ನಿರ್ಧರಿಸುತ್ತಾರೋ ಅಥವಾ ನೆತನ್ಯಾಹು ಕೂಡ ತಮ್ಮ ಅಭಿಪ್ರಾಯ ತಿಳಿಸುತ್ತಾರೋ ಎಂಬ ಪ್ರಶ್ನೆಗೆ ಟ್ರಂಪ್ ಪ್ರತುಕ್ರಿಯಿಸಿದ್ದಾರೆ. ನಾವಿಬ್ಬರೂ ಮಾತುಕತೆ ನಡೆಸುತ್ತಿದ್ದೇವೆ ಎಂದರು.
ನಾನು ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ, ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಮೆರಿಕ ತನ್ನ ದಾಳಿಯನ್ನು ನಿಲ್ಲಿಸಲು ನಿರ್ಧರಿಸಿದ ನಂತರವೂ ಇಸ್ರೇಲ್ ಇರಾನ್ ವಿರುದ್ಧ ಯುದ್ಧವನ್ನು ಮುಂದುವರೆಸಬಹುದೇ ಎಂಬ ಪ್ರಶ್ನೆಗೆ ಟ್ರಂಪ್ ಪ್ರತಿಕ್ರಿಯಿಸಿ ಅದು ಅಗತ್ಯ ಎಂದು ನನಗೆ ಅನಿಸುತ್ತಿಲ್ಲ ಎಂದರು.
ಫೆಬ್ರವರಿ 28 ಎಂದು ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಮೇಲೆ ದಾಳಿ ಮಾಡಿದ್ದವು, ಇದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿಯ ಹತ್ಯೆಗೆ ಕಾರಣವಾಗಿತ್ತು. ಇರಾನ್‌ನ ತಜ್ಞರ ಸಭೆಯು ಖಮೇನಿಯ ಮಗ ಮೊಜ್ತಬಾ ಅವರನ್ನು ದೇಶದ ಮುಂದಿನ ಸರ್ವೋಚ್ಚ ನಾಯಕನನ್ನಾಗಿ ನೇಮಿಸಿದೆ.
ಈ ಯುದ್ಧದಲ್ಲಿ ಇರಾನ್‌ನಲ್ಲಿ ಕನಿಷ್ಠ 1,230 ಜನರು, ಲೆಬನಾನ್‌ನಲ್ಲಿ ಕನಿಷ್ಠ 397 ಜನರು ಮತ್ತು ಇಸ್ರೇಲ್‌ನಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



