ಟಿ20 ವಿಶ್ವಕಪ್ ಗೆಲುವು: ಟೀಮ್ ಇಂಡಿಯಾಗೆ ಪ್ರಧಾನಿ ಮೋದಿ ಶ್ಲಾಘನೆ


ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಗಳ ಭಾರೀ ಮೊತ್ತವನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ ತಂಡ 96 ರನ್‌ಗಳ ಭರ್ಜರಿ ಜಯ ಸಾಧಿಸಿತು

T20 World Cup 2026:

 ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಟೀಮ್ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಿತ್ತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ 89 ರನ್ ಬಾರಿಸಿದರೆ, ಅಭಿಷೇಕ್ ಶರ್ಮಾ 52 ರನ್ ಚಚ್ಚಿದ್ದರು. ಇನ್ನು ಇಶಾನ್ ಕಿಶನ್ 54 ರನ್​ಗಳ ಇನಿಂಗ್ಸ್ ಆಡಿದ್ದರು. ಈ ಮೂರು ಅರ್ಧಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ ಈ ಪಂದ್ಯದಲ್ಲಿ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 255 ರನ್ ಕಲೆಹಾಕಿತು.

ಅದರಂತೆ 256 ರನ್​ಗಳ ಗುರಿ ಪಡೆದ ನ್ಯೂಝಿಲೆಂಡ್ ತಂಡವು 72 ರನ್​ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಮಾರಕ ದಾಳಿ ಮುಂದುವರೆಸಿದ ಜಸ್​ಪ್ರೀತ್ ಬುಮ್ರಾ 4 ವಿಕೆಟ್ ಉರುಳಿಸಿದರು. ಈ ಮೂಲಕ ಟೀಮ್ ಇಂಡಿಯಾ ಬೌಲರ್​ಗಳು ನ್ಯೂಝಿಲೆಂಡ್ ತಂಡವನ್ನು 19 ಓವರ್​ಗಳಲ್ಲಿ 159 ರನ್​ಗಳಿಗೆ ನಿಯಂತ್ರಿಸಿ ಆಲೌಟ್ ಮಾಡಿದರು. ಈ ಮೂಲಕ ಟೀಮ್ ಇಂಡಿಯಾ 96 ರನ್​ಗಳ ಪ್ರಚಂಡ ಗೆಲುವು ದಾಖಲಿಸಿದೆ.

ಭಾರತ ತಂಡದ ಈ ಅಮೋಘ ಗೆಲುವಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಟೀಮ್ ಇಂಡಿಯಾದ ಪ್ರದರ್ಶನವನ್ನು ಹಾಡಿ ಹೊಗಳಿದಿದ್ದಾರೆ.

ಚಾಂಪಿಯನ್ಸ್! ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು! ಈ ಗಮನಾರ್ಹ ಗೆಲುವು ಅಸಾಧಾರಣ ಕೌಶಲ್ಯ, ದೃಢನಿಶ್ಚಯ ಮತ್ತು ತಂಡದ ಕೆಲಸವನ್ನು ಪ್ರತಿಬಿಂಬಿಸುತ್ತದೆ. ಟೀಮ್ ಇಂಡಿಯಾ ಟೂರ್ನಿಯುದ್ದಕ್ಕೂ ಅತ್ಯುತ್ತಮ ಧೈರ್ಯವನ್ನು ತೋರಿಸಿದ್ದಾರೆ. ಈ ಗೆಲುವು ಪ್ರತಿಯೊಬ್ಬ ಭಾರತೀಯನು ಸಂತಸ ಮತ್ತು ಹೆಮ್ಮೆ ಪಡುವಂತೆ ಮಾಡಿದೆ. ಅಭಿನಂದನೆಗಳು, ಟೀಮ್ ಇಂಡಿಯಾ! ಎಂದು ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.