ಶಿರಸಿ:
ಮಕರ ಸಂಕ್ರಾಂತಿ ಸಂಭ್ರಮದ ನಡುವೆ ನಗರದ ನಟರಾಜ ನೃತ್ಯ ಶಾಲೆಯ 32ನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿತು. ನಗರದ ತೋಟಗಾರ್ಸ್ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭರತನಾಟ್ಯದ ಸುಂದರ ನೃತ್ಯಬಂಧಗಳು ಪ್ರದರ್ಶಿಸಲ್ಪಟ್ಟು ಸಂಸ್ಕೃತಿಯ ಸೊಗಡನ್ನು ಮೂಡಿಸಿತು.

ನೃತ್ಯಗುರು ವಿ.ಸೀಮಾ ಭಾಗ್ವತ ಅವರ ನಿರ್ದೇಶನದಲ್ಲಿ ಭರತನಾಟ್ಯ ಕಲಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಯುವ ಕಲಾವಿದರು ವೈವಿಧ್ಯಮಯ ನೃತ್ಯ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.

ಮಕ್ಕಳಿಂದ ಹಿಡಿದು ಮಹಿಳೆಯರ ತನಕ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವೇದಿಕೆ ಮೇಲೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು, ಪ್ರತಿ ಪ್ರದರ್ಶನಕ್ಕೂ ಪ್ರೇಕ್ಷಕರಿಂದ ಭಾರೀ ಚಪ್ಪಾಳೆಯ ಮೆಚ್ಚುಗೆ ವ್ಯಕ್ತವಾಯಿತು.

ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿ. ಸೀಮಾ ಭಾಗ್ವತ, ಗಾಯನದಲ್ಲಿ ಮೈಸೂರಿನ ವಿ. ನವೀನ್ ಅಂದಗಾರು, ಮೃದಂಗದಲ್ಲಿ ವಿ. ವಿಕ್ರಮ ಭಾರದ್ವಾಜ, ಕೊಳಲಿನಲ್ಲಿ ವಿ. ದೀಪಕ್ ಹೆಬ್ಬಾರ್,
ವೈಲಿನ್‌ನಲ್ಲಿ ವಿ. ಶ್ರೀಕಾಂತ ಹಾಗೂ ರಿದಮ್ ಪ್ಯಾಡ್‌ನಲ್ಲಿ ರಾಘವೇಂದ್ರ ರಂಗದೋಳ್ ಕಾರ್ಯಕ್ರಮಕ್ಕೆ ಶಾಸ್ತ್ರೀಯ ವೈಭವ ಹೆಚ್ಚಿಸಿದರು. ಸಾವಿರಾರು ಪ್ರೇಕ್ಷಕರು ಯುವ ಭರವಸೆಯ ಕಲಾವಿದರ ಮನಮೋಹಕ ನೃತ್ಯ ಪ್ರದರ್ಶನಕ್ಕೆ ಸಾಕ್ಷಿಯಾದರು.


