
ಪ್ರತಿಯೊಂದು ಹಿಂದೂ ಮನೆಗಳಲ್ಲಿ ಅಂಗಳದಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ಮುಂಜಾನೆ ಎದ್ದು ತುಳಸಿ ಗಿಡಕ್ಕೆ ಪೂಜೆ ಮಾಡಿದ ನಂತರ ದಿನವನ್ನು ಆರಂಭಿಸುವ ವಾಡಿಕೆ.
ತುಳಸಿ ಪೂಜೆ ಸಂಭ್ರಮದ ನಿಮಿತ್ತ ಮಾರುಕಟ್ಟೆಯಲ್ಲಿ ಬಗೆಬಗೆಯ ಹೂವುಗಳು ಕಂಡುಬಂದವು. ತುಳಸಿ ಪೂಜೆ ಹಿಂದೂ ಧರ್ಮದ ಪೂಜನೀಯ ಹಬ್ಬವಾಗಿರುವ ಕಾರಣ ಶನಿವಾರವೇ ತುಳಸಿ ಕಟ್ಟೆಯನ್ನು ಸ್ವಚ್ಛಪಡಿಸುವ ಕಾರ್ಯ ವಿವಿಧೆಡೆ ನಡೆಯಿತು. ತುಳಸಿ ಗಿಡವನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತಿದ್ದು, ತುಳಸಿ ಪೂಜೆಯ ದಿನ ವಿಷ್ಣುವಿನ ರೂಪವಾದ ಸಾಲಿಗ್ರಾಮದೊಂದಿಗೆ ತುಳಸಿಗೆ ವಿವಾಹ ಮಾಡಿಸುವ ಸಂಪ್ರದಾಯ ಹಲವು ಕಡೆಗಳಲ್ಲಿ ನಡೆಯುವುದಿದೆ. ಕೆಲವರು ಹುಣ್ಣಿಮೆಯಂದು ತುಳಸಿ ಹಬ್ಬ ಆಚರಿಸುತ್ತಾರೆ.
ದೀಪಗಳನ್ನು ಇಡಬೇಕು. ದೀಪಕ್ಕೆ ತಾಮ್ರ, ಹಿತ್ತಾಳೆ ಅಥವಾ ಇದಾವುದೂ ಇಲ್ಲವೆಂದಲ್ಲಿ ಅಡಿಕೆ ತಟ್ಟೆಗಳನ್ನು ಇಡಬೇಕು. ಪೂಜೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಅಂದರೆ ದೀಪ, ಧೂಪದ್ರವ್ಯ, ಅಕ್ಕಿ, ಹೂವುಗಳು, ಹಣ್ಣುಗಳು, ಕಬ್ಬು ಇತ್ಯಾದಿಗಳನ್ನು ಸಂಗ್ರಹಿಸಿ. ಪೂಜೆಯ ಸಮಯದಲ್ಲಿ ಮಂತ್ರಗಳನ್ನು ಪಠಿಸಬೇಕು. ಈ ದಿನ ಬಡವರಿಗೆ ಆಹಾರ ಅಥವಾ ಬಟ್ಟೆಗಳನ್ನು ದಾನ ಮಾಡುವುದು ಸಹ ಶುಭವನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ತುಳಸಿ ಗಿಡಕ್ಕೆ ಹೂವಿನ ಅಲಂಕಾರ, ವಿಶೇಷ ನೈವೇದ್ಯ ಮತ್ತು ಹಣ್ಣು ಹಂಪಲುಗಳನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ತುಳಸಿ ಗಿಡಕ್ಕೆ ಕೆಂಪು ಸೀರೆ, ಆಭರಣ, ಕೆಂಪು ಕುಂಕುಮದೊಂದಿಗೆ ಅಲಂಕರಿಸುವ ಸಂಪ್ರದಾಯವೂ ಕೆಲವೆಡೆ ಇದೆ. ವಿಷ್ಣು ವಿಗ್ರಹಕ್ಕೆ ಬಿಳಿ ಬಟ್ಟೆಯಿಂದ ಅಲಂಕರಿಸಲಾಗುತ್ತದೆ. ಅನಂತರ ಧಾರಗಳಿಂದ ವಿಗ್ರಹ ಹಾಗೂ ಸಸ್ಯದ ಸುತ್ತಲೂ ಸುತ್ತಿ ಬಳಿಕ ವಿಶೇಷ ಮಂತ್ರ, ಪ್ರಾರ್ಥನೆ ಮೂಲಕ ಪೂಜೆ ಸಲ್ಲಿಸುವ ಕ್ರಮ ಚಾಲ್ತಿಯಲ್ಲಿದೆ. ತುಳಸಿ ಪೂಜೆ ನಿಮಿತ್ತ ಜಿಲ್ಲೆಯಲ್ಲಿ ಕಬ್ಬು, ಹೂವು ಹಾಗೂ ಹಣ್ಣುಗಳ ದರವೂ ಹೆಚ್ಚಳವಾಗಿತ್ತು. ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯ ಕಾರಣ ಅನ್ಯ ಜಿಲ್ಲೆಯ ವ್ಯಾಪಾರಸ್ಥರ ಸಂಖ್ಯೆಯೂ ಕಡಿಮೆಯಾಗಿತ್ತು.

ಸಾಮಾನ್ಯವಾಗಿ ತುಳಸಿಗಿಡ ಪಕ್ಕದಲ್ಲಿ ಬೆಟ್ಟದ ನೆಲ್ಲಿಕಾಯಿ ಗಿಡದ ಕೊಂಬೆ ಇಡುತ್ತಾರೆ. ಈ ಬೆಟ್ಟದ ನೆಲ್ಲಿಕಾಯಿ ಕೊಂಬೆಯಲ್ಲಿ ವಿಷ್ಣುವಿನ ಸಾನಿಧ್ಯವಿದೆ ಎಂದು ನಂಬಲಾಗಿದೆ. ಹೀಗಾಗಿ ತುಳಸಿ ಗಿಡದ ಪಕ್ಕದಲ್ಲಿ ಈ ಬೆಟ್ಟದ ನೆಲ್ಲಿಕಾಯಿ ಗಿಡದ ಕೊಂಬೆ ಇಟ್ಟು ಪೂಜೆ ಮಾಡಲಾಗುತ್ತದೆ.


