ಬಳ್ಳಾರಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅನುದಾನ ಸಿಗುವುದು ಕಷ್ಟವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 55 ರಿಂದ 60 ಸಾವಿರ ಕೋಟಿ ರೂ. ಅಗತ್ಯವಿದೆ. ಇದರ ಪರಿಣಾಮವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ದೊರೆಯುವುದು ಕಷ್ಟವಾಗಿದೆ,” ಎಂದರು.

ಅವರು ಮುಂದುವರಿಸಿ, “ಇಲ್ಲಿನ ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅನುದಾನಕ್ಕಾಗಿ ಕೆಲವೊಮ್ಮೆ ಕಾಲಿಗೆ ಬಿದ್ದು ಕೇಳಬೇಕಾದ ಪರಿಸ್ಥಿತಿಯೂ ಬರುತ್ತದೆ,” ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರನ್ನು ಹೊಗಳುವ ವೇಳೆ ಹೇಳಿದರು. ಸಚಿವ ಜಮೀರ್ ಅಹಮ್ಮದ್ ಅವರ ಈ ಹೇಳಿಕೆ, ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ ಎಂಬ ವಿಪಕ್ಷದ ಆರೋಪಕ್ಕೆ ಮತ್ತಷ್ಟು ಬಲ ನೀಡುವಂತಾಗಿದೆ.
