ದರೋಜಿ ಕರಡಿಧಾಮದಲ್ಲಿ ಕಂಡುಬಂದ ಅಪರೂಪದ ಸ್ಕಾಪ್ಸ್ ಗೂಬೆ

ಬಳ್ಳಾರಿ: ವಿಶಿಷ್ಟ ಕಿವಿ ಹೊಂದಿರುವ ಭಾರತೀಯ ಸ್ಕಾಪ್ಸ್ ಗೂಬೆ ಮೊದಲ ಬಾರಿಗೆ ದರೋಜಿ ಕರಡಿಧಾಮ ಪ್ರದೇಶದಲ್ಲಿ ಪತ್ತೆಯಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ದರೋಜಿ ಕರಡಿಧಾಮದ ಸುತ್ತಮುತ್ತ ಪತ್ತೆಯಾದ ಈ ಗೂಬೆ ಗಾತ್ರದಲ್ಲಿ ಚಿಕ್ಕದಾಗಿದ್ದು, ಸುಮಾರು 20 ರಿಂದ 25 ಸೆಂ.ಮೀ ಉದ್ದವಿದೆ. ಇದು ಬೂದು ಬಣ್ಣದ್ದಾಗಿದ್ದು, ಕಣ್ಣುಗಳು ಕಡು ಕಂದು ಬಣ್ಣದಂತಿವೆ.

ದೆಹದ ಬಣ್ಣ ಸುತ್ತಮುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವುದರಿಂದ ಹಗಲಿನಲ್ಲಿ ಪತ್ತೆ ಹಚ್ಚುವುದು ಬಹಳ ಕಷ್ಟಕರ. ‘ವಟ್ ವಟ್’ ಎಂಬ ಅದರ ವಿಶಿಷ್ಟ ಶಬ್ದವನ್ನು ಹಿಂಬಾಲಿಸಿ ಪಕ್ಷಿ ಪ್ರೇಮಿಗಳಾದ ಸಬ್ಯಸಾಚಿ ರಾಯ್, ಶ್ರೀಧರ್ ಪೆರುಮಾಳ್ ಮತ್ತು ಪಂಪಯ್ಯ ಸ್ವಾಮಿ ಮಳೆಮಠ ಅವರು ಅಪರೂಪದ ಈ ಗೂಬೆಯ ಚಿತ್ರವನ್ನು ಸೆರೆಹಿಡಿಯಲು ಯಶಸ್ವಿಯಾಗಿದ್ದಾರೆ. ಸ್ಕಾಪ್ಸ್ ಗೂಬೆ ಈ ಪ್ರದೇಶದಲ್ಲಿ ಮೊದಲ ಬಾರಿಗೆ ಗೋಚರಿಸಿರುವುದು ಪಕ್ಷಿಶಾಸ್ತ್ರಜ್ಞರಲ್ಲಿ ಮತ್ತು ಪ್ರಕೃತಿ ಪ್ರೇಮಿಗಳಲ್ಲಿ ಕುತೂಹಲ ಉಂಟುಮಾಡಿದೆ.