Viral News: ರಾಜ್ಯಾದ್ಯಂತ ಎಲ್ಲ ಅಂಗಡಿ, ವಾಣಿಜ್ಯ ಮಳಿಗೆ, ಶಾಪಿಂಗ್ ಮಾಲ್, ಆಸ್ಪತ್ರೆ, ಖಾಸಗಿ ಕಚೇರಿ ಹಾಗೂ ಕಂಪೆನಿಗಳ ನಾಮಫಲಕಗಳನ್ನು ಕಡ್ಡಾಯವಾಗಿ ಶೇ. 60ರಷ್ಟು ಕನ್ನಡದ ದೊಡ್ಡ ಅಕ್ಷಗಳಲ್ಲಿ ಬರೆಯಬೇಕು ಎನ್ನುವ ಆದೇಶವಿದೆ. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಈ ಆದೇಶವನ್ನು ಅವಸರದಿಂದ ಪಾಲಿಸಲು ಹೋಗಿ ಅನೇಕರು ದೊಡ್ಡ ಎಡವಟ್ಟು ಮಾಡಿಕೊಳ್ಳುತ್ತಾರೆ. ಬೆಳಗಾವಿಯ ಬಟ್ಟೆ ಮಳಿಗೆಯ ಮಾಲೀಕನೂ ಇಂತಹದ್ದೊಂದು ತಪ್ಪು ಮಾಡಿ ಟ್ರೋಲ್‌ಗೆ ಗುರಿಯಾಗಿದ್ದ. ಸದ್ಯ ಆತ ತಪ್ಪಾದ ಬೋರ್ಡ್ ಬದಲಾಯಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ. ಆ ಕುರಿತಾದ ವಿವರ ಇಲ್ಲಿದೆ.
ಬೆಳಗಾವಿ, ಏಪ್ರಿಲ್ 01 : ರಾಜ್ಯದಲ್ಲಿನ ಅಂಗಡಿಗಳ ನಾಮ ಫಲಕ (ಬೋರ್ಡ್) ಕನ್ನಡದಲ್ಲಿ ಇರಬೇಕು ಎನ್ನುವ ಕೂಗು ವ್ಯಾಪಕವಾಗಿ ಕೇಳಿ ಬಂದಿದೆ. ಈ ಬಗ್ಗೆ ಸರ್ಕಾರವೂ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಆದೇಶವನ್ನು ಪಾಲಿಸಲು ಮುಂದಾದ ಅನೇಕರು ಭಾಷಾಂತರಕ್ಕೆ ಗೂಗಲ್ ಟ್ರಾನ್ಸ್‌ಲೇಟ್ ಮೊರೆ ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಗೂಗಲ್ ಟ್ರಾನ್ಸ್‌ಲೇಟ್ ಮಾಡಿದ್ದನ್ನು ಯಥಾ ಪ್ರಕಾರ ಅಂತೆಯೇ ಅಳವಡಿಸಿ ಪೇಚಿಗೆ ಸಿಲುಕಿದವರೂ ಇದ್ದಾರೆ. ಜತೆಗೆ ಅನರ್ಥ ಭಾಷಾಂತರದ ಕಾರಣಕ್ಕೆ ಟ್ರೋಲಿಗರಿಗೆ ಆಹಾರವಾಗುವ ಜತೆಗೆ ಭಾಷಾ ಪ್ರೇಮಿಗಳ ಆಕ್ರೋಶಕ್ಕೂ ತುತ್ತಾಗಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಬೆಳಗಾವಿಯೊಂದರ ಮಳಿಗೆ. ಇದೀಗ ಎಡವಟ್ಟನ್ನು ಮನದಟ್ಟು ಮಾಡಿಕೊಂಡ ಮಳಿಗೆಯ ಅಧಿಕೃತರು ಬೋರ್ಡ್ ಬದಲಾಯಿಸಿದ್ದಾರೆ. ಹಾಗಾದರೆ ಮೊದಲು ಬೋರ್ಡ್‌ನಲ್ಲಿ ಏನು ಬರೆಯಲಾಗಿತ್ತು? ಬೋರ್ಡ್ ವೈರಲ್ ಆಗಿದ್ದೇಕೆ? ಮೊದಲಾದ ವಿವರ ಇಲ್ಲಿದೆ (Viral News).
ಸತ್ತಗುರು !
ಅರೇ ಇದೇನಿದು? ಎಂದು ಅಚ್ಚರಿಗೊಳಗಾಗಬೇಡಿ. ಯಾಕೆಂದರೆ ಬೆಳಗಾವಿಯ ಮಳಿಗೆಯೊಂದರ ಬೋರ್ಡ್‌ನಲ್ಲಿ ರಾರಾಜಿಸುತ್ತಿದ್ದ ಹೆಸರಿದು. ಈ ಬಟ್ಟೆ ಅಂಗಡಿಯ ಹೆಸರು ಇಂಗ್ಲಿಷ್‌ನಲ್ಲಿ SATGURU ಎಂದಿದೆ. ಫಲಕ ಕನ್ನಡದಲ್ಲಿಯೂ ಇರಬೇಕು ಎನ್ನುವ ಅವರಸರಕ್ಕೆ ಮಾಲೀಕ ಇದನ್ನು ಗೂಗಲ್ ಟ್ರಾನ್ಸ್‌ಲೇಟ್ ಮಾಡಿದ್ದಾನೆ. ಆಗ ಅದು ʼಸತ್ತಗುರುʼ ಎಂದು ತೋರಿಸಿದೆ. ಹಿಂದೆ ಮುಂದೆ ನೋಡದ ಮಾಲೀಕ ಅದನ್ನೇ ದೊಡ್ಡದಾಗಿ ಬರೆಸಿ ಅಂಗಡಿ ಮುಂದೆ ಅಳವಡಿಸಿ ತನ್ನ ಕರ್ತವ್ಯ ಮುಗಿಯಿತು ಎಂಬಂತೆ ನಿಟ್ಟುಸಿರು ಬಿಟ್ಟಿದ್ದಾನೆ.
ಟ್ರೋಲ್‌ಗಳ ಸುರಿಮಳೆ
ಬಳಿಕ ಈ ʼಸತ್ತಗುರುʼ ಬೋರ್ಡ್ ಸೋಷಿಯಲ್ ಮೀಡಿಯಾ ತುಂಬ ಹರಿದಾಡಿದೆ. ಕನ್ನಡ ಅಕ್ಷರಗಳ ಕಗ್ಗೊಲೆ ಆಗಿರುವ ಜತೆಗೆ ಕೆಟ್ಟ ಅರ್ಥ ಬರುವ ಪದಗಳ ಬಳಕೆ ಆಗಿದ್ದರಿಂದ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಕನ್ನಡ ಫಲಕ ಕಡ್ಡಾಯ ಎನ್ನುವ ನೆಪದಲ್ಲಿ ಇಂತಹ ಎಡವಟ್ಟು ಎಷ್ಟು ಸರಿ? ಕನಿಷ್ಠ ಬೋರ್ಡ್ ಅಳವಡಿಸುವ ಮುನ್ನ ಭಾಷೆ ತಿಳಿದಿರುವವರ ಗಮನಕ್ಕೆ ತರಬಾರದೆ? ಎಂದು ಅನೇಕರು ಪ್ರಶ್ನಿಸಿದ್ದರು. ಜತೆಗೆ ಅನೇಕರು ಅಂಗಡಿ ಮಾಲೀಕರ ಈ ನಡೆಯನ್ನು ಕಟುವಾದ ಶಬ್ದಗಳಿಂದ ಟೀಕಿಸಿದ್ದರು.
ಕೊನೆಗೂ ಬದಲಾಯ್ತು ಬೋರ್ಡ್
ವ್ಯಾಪಕ ಟೀಕೆಗಳ ನಂತರ ಕೊನೆಗೂ ಅಂಗಡಿ ಮಾಲೀಕ ಅಂಗಡಿ ಬೋರ್ಡ್ ಅನ್ನು ಬದಲಾಯಿಸಿ ಸರಿಯಾದ ನಾಮ ಫಲಕ ಅಳವಡಿಸಿದ್ದಾನೆ. ಸದ್ಯ ಅಂಗಡಿ ಮುಂದೆ ʼಸತ್‌ಗುರುʼ ಎನ್ನುವ ಹೆಸರು ರಾರಾಜಿಸುತ್ತಿದೆ.
ಸೆಕ್ಸ್‌ಹೌಸ್!
ನಾಮ ಫಲಕದ ವಿಚಾರದಲ್ಲಿ ನಡೆಯುತ್ತಿರುವ ಎಡವಟ್ಟು ಒಂದೆರಡಲ್ಲ. ಇದು ಕೇವಲ ಸಣ್ಣ ಉದಾಹರಣೆಯಷ್ಟೇ. ಒಂದು ಕಡೆ SPEXHOUSE ಇದ್ದ ಬೋರ್ಡ್ ಅನ್ನು ಭಾಷಾಂತರಗೊಳಿಸಿ ʼಸೆಕ್ಸ್‌ಹೌಸ್ʼ ಮಾಡಲಾಗಿದೆ ! ಇನ್ನೊಂದು ಕಡೆ ʼನಮ್ಮ ಗೋಲ್‌ಗಪ್ಪೆ ಅಂಡ್ ಫಲೂದಾ ಪಾಯಿಂಟ್ʼ ಬೋರ್ಡ್ ಕೂಡ ಕಣ್ಣಿಗೆ ರಾಚಿದೆ. ಹೋಟೆಲ್ ಒಂದರಲ್ಲಿ ಕಂಡ ʼಊತ್ತ ಅಣ್ಣಾಸಂಬರ್, ರೈಸ್ ಬಾತ್, ಇಡಲಿ ವದ, ದೋಷ ಸೆಟ್, ಮಸಾಲಾ ದೋಷʼ ಮೆನು ಓದಿ ತಲೆ ತಿರುಗುವೊಂದು ಬಾಕಿ ಎಂದು ಕನ್ನಡಿಗರೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಕನ್ನಡದ ನಾಮ ಫಲಕ ಅಳವಡಿಸುವ ಜತೆಗೆ ಸರಿಯಾದ ಭಾಷೆ ಬಳಸುವಂತೆಯೂ ಕಾನೂನು ಜಾರಿಗೊಳಿಸಬೇಕು ಎನ್ನುವುದು ಬಹುತೇಕರ ಆಗ್ರಹ.