ಆರು ತಿಂಗಳಿನಿಂದ ವಿವಿಯಲ್ಲಿ ಕೊಳೆಯುತ್ತಿವೆ 70 ಸಾವಿರ ಅಂಕಪಟ್ಟಿಗಳು

ಬಳ್ಳಾರಿ, ಅಕ್ಟೋಬರ್ 19: ಪರೀಕ್ಷೆ ಮುಗಿಸಿ ಫಲಿತಾಂಶ ಬಂದ ಬಳಿಕ ವಿದ್ಯಾರ್ಥಿಗಳು ಕಾತರದಿಂದ ಮಾರ್ಕ್ಸ್ ಕಾರ್ಡ್ ಕಾದಿರುತ್ತಾರೆ. ಆದರೆ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ 70 ಸಾವಿರಕ್ಕೂ ಹೆಚ್ಚು ಅಂಕಪಟ್ಟಿಗಳು ಕಳೆದ ಆರು ತಿಂಗಳಿಂದ ವಿವಿಯಲ್ಲೇ ಕೊಳೆಯುತ್ತಿವೆ.

ವಿಶ್ವವಿದ್ಯಾಲಯದ ಅಡಿಯಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಒಟ್ಟು 80 ಕಾಲೇಜುಗಳಿವೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. ತಾಂತ್ರಿಕ ಕಾರಣದಿಂದ ಎರಡು ಸೆಮಿಸ್ಟರ್ ಮಾರ್ಕ್ಸ್ ಕಾರ್ಡ್‌ಗಳು ತಡವಾಗಿ ಬಂದಿದ್ದರೂ, ಆರು ತಿಂಗಳ ಹಿಂದೆ ಎಲ್ಲ ಅಂಕಪಟ್ಟಿಗಳು ವಿವಿಯ ಪರೀಕ್ಷಾಂಗ ವಿಭಾಗಕ್ಕೆ ಬಂದಿವೆ.

ನಿಯಮದ ಪ್ರಕಾರ, ಆಯಾ ಕಾಲೇಜಿನ ಪ್ರಾಂಶುಪಾಲರು ಅಥವಾ ಸಿಬ್ಬಂದಿ ವಿವಿಗೆ ಬಂದು ಮಾರ್ಕ್ಸ್ ಕಾರ್ಡ್‌ಗಳನ್ನು ಪಡೆದು ವಿದ್ಯಾರ್ಥಿಗಳಿಗೆ ಹಂಚಬೇಕು. ಆದರೆ ಕಳೆದ ಆರು ತಿಂಗಳಲ್ಲಿ ಯಾರೂ ಬಂದಿಲ್ಲ. ವಿವಿಯಿಂದ ಮೂರು ಬಾರಿ ಸುತ್ತೋಲೆ ಹೊರಡಿಸಿದ್ದು, ಎರಡು ಬಾರಿ ಪ್ರಾಂಶುಪಾಲರ ಸಭೆಯೂ ನಡೆದರೂ ಪ್ರತಿಕ್ರಿಯೆ ಸಿಕ್ಕಿಲ್ಲ.

ವಿದ್ಯಾರ್ಥಿಗಳು ಕಾಲೇಜಿನಲ್ಲಿ ಮಾರ್ಕ್ಸ್ ಕಾರ್ಡ್ ಕೇಳಿದರೆ, “ವಿವಿಯಿಂದ ಇನ್ನೂ ಬಂದಿಲ್ಲ” ಎಂಬ ಕಾರಣ ಹೇಳಿ ಆಡಳಿತ ಮಂಡಳಿ ಹೊಣೆ ತಪ್ಪಿಸುತ್ತಿದೆ. ಇದರ ಪರಿಣಾಮವಾಗಿ ವಿವಿಗೆ ಕೆಟ್ಟ ಹೆಸರು ಬರುತ್ತಿದೆ. ಈ ಪರಿಸ್ಥಿತಿಯನ್ನು ತಪ್ಪಿಸಲು 70 ಸಾವಿರ ಮಾರ್ಕ್ಸ್ ಕಾರ್ಡ್‌ಗಳನ್ನು ನೇರವಾಗಿ ಕಾಲೇಜುಗಳಿಗೆ ಪೋಸ್ಟ್ ಮಾಡುವ ತಯಾರಿ ನಡೆಯುತ್ತಿದೆ ಎಂದು ಮೌಲ್ಯಮಾಪನ ಕುಲಸಚಿವ ಎನ್.ಎಂ. ಸಾಲಿ ತಿಳಿಸಿದ್ದಾರೆ.