ಟೀಮ್ ಇಂಡಿಯಾ ಪರ ಅಂತರ ರಾಷ್ಟ್ರೀಯ ಕ್ರಿಕೆಟ್ನಲ್ಲಿ ಐನೂರಕ್ಕೂ ಹೆಚ್ಚು ಪಂದ್ಯಗಳಾಡಿರುವುದು ಕೇವಲ ನಾಲ್ವರು ಆಟಗಾರರು ಮಾತ್ರ. ಇದೀಗ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಈ ಸಾಧಕರ ಪಟ್ಟಿಗೆ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕೂಡ ಸೇರ್ಪಡೆಯಾಗಿದ್ದಾರೆ.

ಪರ್ತ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ ರೋಹಿತ್ ಶರ್ಮಾ ವಿಶೇಷ ದಾಖಲೆ ಬರೆದಿದ್ದಾರೆ. ಅದು ಸಹ 500 ಅಂತಾರಾಷ್ಟ್ರೀಯ ಪಂದ್ಯಗಳನ್ನು ಪೂರೈಸುವ ಮೂಲಕ ಎಂಬುದು ವಿಶೇಷ.
ಅಂದರೆ ಭಾರತದ ಪರ 500 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವುದು ಕೇವಲ 5 ಮಂದಿ ಮಾತ್ರ. ಈ ಐವರಲ್ಲಿ ಇದೀಗ ಐದನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ 500 ಪಂದ್ಯಗಳನ್ನಾಡಿದ ವಿಶೇಷ ಸಾಧಕರ ಪಟ್ಟಿಗೆ ಹಿಟ್ಮ್ಯಾನ್ ಸೇರ್ಪಡೆಯಾಗಿದ್ದಾರೆ.

ಇದಕ್ಕೂ ಮುನ್ನ ಭಾರತದ ಪರ ಸಚಿನ್ ತೆಂಡೂಲ್ಕರ್ (664), ವಿರಾಟ್ ಕೊಹ್ಲಿ (551), ಮಹೇಂದ್ರ ಸಿಂಗ್ ಧೋನಿ (535) ಮತ್ತು ರಾಹುಲ್ ದ್ರಾವಿಡ್ (504) ಮಾತ್ರ 500 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದ ಸಾಧನೆ ಮಾಡಿದ್ದರು. ಇದೀಗ ಈ ಸಾಧನೆ ಮಾಡಿದ ಐದನೇ ಭಾರತೀಯನಾಗಿ ರೋಹಿತ್ ಶರ್ಮಾ ಗುರುತಿಸಿಕೊಂಡಿದ್ದಾರೆ.
