ಭಾರತ ತಂಡ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇದೇ ಭಾನುವಾರದಿಂದ ಅಂದರೆ ಅಕ್ಟೋಬರ್ 19 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಪರ್ತ್ ಮೈದಾನದಲ್ಲಿ ನಡೆಯಲಿದ್ದು, ಯುವ ಆರಂಭಿಕ ಶುಭ್ಮನ್ ಗಿಲ್ ಭಾರತದ ನಾಯಕತ್ವ ವಹಿಸುತ್ತಿರುವುದರಿಂದ ಈ ಪಂದ್ಯದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಅಲ್ಲದೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 7 ತಿಂಗಳುಗಳ ನಂತರ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೂಡ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿ ಮಾಡಿದೆ. ಆದಾಗ್ಯೂ ಆಸ್ಟ್ರೇಲಿಯಾ ತಂಡವನ್ನು ಅವರ ನೆಲದಲ್ಲಿ ಮಣಿಸುವುದು ಎಂದಿಗೂ ಸುಲಭವಲ್ಲ. ಇದಕ್ಕೆ ಪೂರಕವಾಗಿ ಅಂಕಿಅಂಶಗಳು ಕೂಡ ಟೀಂ ಇಂಡಿಯಾದ ವಿರುದ್ಧವಿರುವ ಕಾರಣ ಗಿಲ್ ಪಡೆ ಸರಣಿ ಗೆಲುವಿಗೆ ಸಾಕಷ್ಟು ಬೆವರು ಹರಿಸಬೇಕಾಗಿದೆ.

ಏಕದಿನದಲ್ಲಿ ಆಸ್ಟ್ರೇಲಿಯಾದ ಮೇಲುಗೈ
ಭಾರತ ಮತ್ತು ಆಸ್ಟ್ರೇಲಿಯಾ ಇಲ್ಲಿಯವರೆಗೆ 152 ಏಕದಿನ ಪಂದ್ಯಗಳನ್ನು ಆಡಿವೆ. ಇದರಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದ್ದು, 84 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ 52 ಪಂದ್ಯಗಳನ್ನು ಗೆದ್ದಿದೆ. ಹತ್ತು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಎರಡೂ ತಂಡಗಳು ಮಾರ್ಚ್‌ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಸಮಯದಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನು ಆಡಿದ್ದವು. ಉಭಯ ತಂಡಗಳ ನಡುವೆ ನಡೆದ ಆ ಸೆಮಿಫೈನಲ್ ಪಂದ್ಯವನ್ನು ಭಾರತ ತಂಡ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ನಾಲ್ಕು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.
ಆಸ್ಟ್ರೇಲಿಯಾದಲ್ಲಿ ಭಾರತದ ದಾಖಲೆ
ಆಸ್ಟ್ರೇಲಿಯಾದಲ್ಲಿ ಭಾರತದ ಏಕದಿನ ದಾಖಲೆ ತೀರ ಕಳಪೆಯಾಗಿದೆ. ಟೀಂ ಇಂಡಿಯಾ ಇದುವರೆಗೆ ಆಸ್ಟ್ರೇಲಿಯಾ ನೆಲದಲ್ಲಿ 54 ಏಕದಿನ ಪಂದ್ಯಗಳನ್ನು ಆಡಿದೆ. ಇದರಲ್ಲಿ ಕೇವಲ 14 ಪಂದ್ಯಗಳನ್ನು ಮಾತ್ರ ಗೆದ್ದಿದ್ದರೆ, ಉಳಿದ 38 ಪಂದ್ಯಗಳನ್ನು ಸೋತಿದೆ. ಎರಡು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಆಸ್ಟ್ರೇಲಿಯಾದಲ್ಲಿ 2020 ರಲ್ಲಿ ತನ್ನ ಏಕದಿನ ಸರಣಿಯನ್ನಾಡಿದ್ದ ಭಾರತ ತಂಡ ಆ ಸರಣಿಯನ್ನು 1-2 ಅಂತರದಿಂದ ಸೋತಿತ್ತು. ಆ ಸಮಯದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕರಾಗಿದ್ದರು.

