ಆರಂಭವಾಯ್ತು ಜೋಯಿಡಾ To ಪೂಣಾ ಹೊಸ ಬಸ್ ಸಂಚಾರ : ಸಾರ್ವಜನಿಕರಲ್ಲಿ ಮನೆಮಾಡಿದ ಸಂತಸ

ಜೋಯಿಡಾ ಅ.18: ಕಾರವಾರದಿಂದ ಮಹಾರಾಷ್ಟ್ರದ ಪೂಣಾಕ್ಕೆ ಜೋಯಿಡಾ ಮೂಲಕ ನೂತನವಾಗಿ ಬಸ್ ಸಂಚಾರ ಆರಂಭಗೊಂಡಿದ್ದು, ತಾಲೂಕಿನ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಈ ಹಿಂದೆ ಕಾರವಾರದಿಂದ ಪಿಂಪ್ರಿಗೆ ಹೋಗುತ್ತಿದ್ದ ಬಸ್ ಸಂಚಾರ ನಿಲ್ಲಿಸಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಇದೀಗ ಪೂಣಾ ಘಟಕದಿಂದ ಹೊಸ ಬಸ್ಸನ್ನು ಪ್ರಾರಂಭಿಸಲಾಗಿದೆ. ಈ ಬಸ್ ಸೇವೆ ಜೋಯಿಡಾ ಮತ್ತು ಸುತ್ತಮುತ್ತಲಿನ ಜನರಿಗೆ ಅಪಾರ ಅನುಕೂಲ ಒದಗಿಸಲಿದೆ. ಕಾರವಾರದಿಂದ ಹೊರಟು ಜೋಯಿಡಾ, ರಾಮನಗರ, ಬೆಳಗಾವಿ ಹಾಗೂ ಪಿಂಪ್ರಿ ಮಾರ್ಗವಾಗಿ ಪೂಣಾವರೆಗೆ ಸಾಗಲಿದೆ.

ಹೊಸ ವೇಳಾಪಟ್ಟಿಯ ಪ್ರಕಾರ, ಈ ಬಸ್ ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಕಾರವಾರದಿಂದ ಹೊರಟು, ಬೆಳಿಗ್ಗೆ 11 ಗಂಟೆಗೆ ಜೋಯಿಡಾ ಕೇಂದ್ರಸ್ಥಳ ತಲುಪಲಿದೆ. ಅದೇ ರೀತಿ, ಬೆಳಗಾವಿಯಿಂದ ಸಂಜೆ 5 ಗಂಟೆಗೆ ಬಸ್ ಬಿಡಲಿದ್ದು, ಅದು ಜೋಯಿಡಾ ಮಾರ್ಗವಾಗಿ ಕಾರವಾರ ತಲುಪಲಿದೆ. ಇದು ಸಂಜೆ ವೇಳೆಗೆ ಸಂಚಾರ ಮಾಡುವ ಸ್ಥಳೀಯ ಪ್ರಯಾಣಿಕರಿಗೆ ಹೆಚ್ಚಿನ ನೆರವಾಗಲಿದೆ.

ಈ ವೇಳೆ ವಿನಯ ದೇಸಾಯಿ, ದೇವಿದಾಸ ದೇಸಾಯಿ, ಸುಭಾಷ ವೇಳಿಪ, ರಫಿಕ್ ಖಾಜಿ, ಆನಂದ ಪೋಕಳೆ, ಪ್ರಸನ್ನ ಗಾವಡಾ, ಸಂತೋಷ ಸಾವಂತ, ಮಾಬಳು ಕುಂಡಲಕರ, ದತ್ತಾರಾಮ ದೇಸಾಯಿ, ದತ್ತಾ ಗಾವಡಾ, ಬಾಬುರಾವ್ ದೇಸಾಯಿ, ದಿವಾಕರ ಕುಂಡಲಕರ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು. ನೂತನ ಬಸ್ ಸೇವೆಗೆ ಸಾರ್ವಜನಿಕರು ಧನ್ಯವಾದ ಸಲ್ಲಿಸಿದ್ದಾರೆ.