ಹೊನ್ನಾವರ : ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ 23ನೇ ಸಾಹಿತ್ಯ ಸಮ್ಮೇಳನ ಸುದ್ದಿಯಾಗಿದ್ದು ಇದೊಂದೇ ವಿಚಾರಕ್ಕೆ ಹೊರತು, ಮತ್ಯಾವ ಕಾರಣಕ್ಕೂ ಅಲ್ಲ. ಯಾಕಂದ್ರೆ ಸಪ್ಪೆ ಸಪ್ಪೆಯಾಗಿದ್ದ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಸಾಹಿತ್ಯ ಪ್ರೇಮಿಗಳ ಮನತಣಿಸುವ ಕೆಲಸಗಳಿಗಿಂತ, ಸರ್ವಾಧ್ಯಕ್ಷರು ಶ್ರೀಪಾದ್ ಶೆಟ್ಟಿ ಗುರು ಮತ್ತು ಶಿಷ್ಯ ವಾಸರೆ, ಕನ್ನಡಕ್ಕೆ ಆಸೆರೆ. ಮುಂತಾದ ಘೋಷಣೆಗಳ, ಹೊಗಳಿಕೆಗಳ ಮಾತಿನಿಂದಲೇ ತುಂಬಿ ಇಡೀ ಸಮ್ಮೇಳನದಲ್ಲಿ ಪರಸ್ಪರ ಹೊಗಳಿಕೆಯೇ ಸಮ್ಮೇಳನದ ಹೆಗ್ಗಳಿಕೆಯಾಗಿದ್ದು ಕಂಡು ಬಂತು. ಇದರ ನಡುವೆ ಸರ್ವಾಧ್ಯಕ್ಷರ ಭಾಷಣ ಪ್ರತೀಕಾರದ ಮಾತುಗಳಿಂದಲೇ ತುಂಬಿ ಹೋಗಿದ್ದು ದುರಂತವೇ ಸರಿ…
ಬನ್ನಿ ಅಸಲಿ ವಿಷಯಕ್ಕೆ ಬರೋಣ.. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬಿ.ಎನ್.ವಾಸರೆ, ಶ್ರೀಪಾದ್ ಶೆಟ್ಟಿಯವರನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಅಂತ ಘೋಷಣೆ ಮಾಡಿದಾಗಲೇ, ಸಣ್ಣದೊಂದು ಸುದ್ದಿ ಜಿಲ್ಲೆಯಾದ್ಯಂತ ಹರಿದಾಡಿತ್ತು. ಅದಕ್ಕೆ ರೆಕ್ಕೆ ಪುಕ್ಕ ಏನೂ ಇರಲಿಲ್ಲ. ಒಂದೊಳ್ಳೆ ಕೆಲಸ ಮಾಡೋಕೆ ಹೊರಟ್ರೆ ಇಂತ ಕೀರಲು ಧ್ವನಿಯ ಆರೋಪ ಕೇಳಿ ಬರುತ್ತೆ.. ಹೀಗಂತ ಎಲ್ರೂ ಸುಮ್ಮನಿದ್ರು. ಆದ್ರೆ ಈ ಸುಳ್ಳು ಸುದ್ದಿಗೆ ಇಂಬು ನೀಡುವಂತೆ ಡಾ.ಶ್ರೀಪಾದ್ ಶೆಟ್ಟಿಯವರು, ಸರ್ವಾಧ್ಯಕ್ಷರ ಘನತೆಯನ್ನು ಬದಿಗೆಸೆದು ತಮ್ಮ ಸರ್ವಾಧ್ಯಕ್ಷರ ಭಾಷಣದಲ್ಲಿ ಕುಂಬಳಕಾಯಿ ಕಳ್ಳ ಎಂದಾಕ್ಷಣ ಹೆಗಲುಜ್ಜಿಕೊಂಡ ಕಳ್ಳನಂತೆ ಆ ಸುದ್ದಿಗೆ ಈ ರೀತಿಯಲ್ಲಿ ಪ್ರತಿಕ್ರಿಯಿಸಿ ಹಲ್ಲು ಕಡಿದಿದ್ದು ಸೇರಿದ ಸಾಹಿತ್ಯಾಭಿಮಾನಿಗಳಲ್ಲಿ ದಿಗಿಲನ್ನುಂಟು ಮಾಡಿತು..
ಸರ್ವಾಧ್ಯಕ್ಷರ ಪ್ರಕಟಿತ ಭಾಷಣದಲ್ಲಿ ಇರದ ವಿಚಾರಗಳನ್ನೇ ಮುಂದಿಟ್ಟುಕೊಂಡು, ನಾನು ಅಂತವನು.. ನನ್ನ ವಿರುದ್ಧ ಮಾತನಾಡುವವರು ಅಂತವರು ಅಂತ ವಿಷಕಾರಿದಂತೆ ಪೂತ್ಕರಿಸಿದ್ದು, ಅವರಿಂದ ಬಹುಮೌಲ್ಯಯುತ ವಿಚಾರಗಳನ್ನು ನಿರೀಕ್ಷಿಸಿದ್ದ ಸಾಹಿತ್ಯಾಭಿಮಾನಿಗಳಿಗೆ ನಿರಾಸೆ ಉಂಟಾಯ್ತು. ಸಂತರ ದಯೆಯಿಂದ ಹುಟ್ಟಿದವನು ನಾನೆಂದು ಕಂಡ ಕಂಡಲ್ಲಿ ಹೇಳಿಕೊಳ್ಳುವ ಇಂತ ಶ್ರೀಪಾದ್ ಶೆಟ್ಟರ ಬಾಯಲ್ಲಿ ಇಂತ ದ್ವೇಷದ ಅಣಿಮುತ್ತುಗಳನ್ನು ಯಾರೂ ನಿರೀಕ್ಷಿಸಿರಲಿಲ್ಲ. ಅವರು ಸ್ನೇಹಕ್ಕೆ ಹೆಸರಾಗಿದ್ದಾವರು ಅಂತ ತಿಳಿದುಕೊಂಡಿದ್ದವರಿಗೆ ಈ ಮಾತು ಅರಗಿಸಿಕೊಳ್ಳಲಾಗದ ತುತ್ತಾಗಿತ್ತು..
ಇಷ್ಟೇ ಆಗಿದ್ರೆ ಈ ಲೇಖನದ ಅಗತ್ಯವೇ ಇರುತ್ತಿರಲಿಲ್ಲ. ಶ್ರೀಪಾದ್ ಶೆಟ್ಟರು ವೇದಿಕೆಯಲ್ಲೇ ದೇವರು ಮೈ ಮೇಲೆ ಬಂದವರಂತೆ ಕುಣಿದ್ರು. ನಾನು ವಾಸರೆಗೆ ಹಣ ಕೊಟ್ಟಿಲ್ಲ. ಹಣ ಕೊಟ್ಟು ಅಧ್ಯಕ್ಷನಾಗಿಲ್ಲ.. ಯಾವ ದೇವರ ಮೇಲಾದ್ರೂ ಪ್ರಮಾಣ ಮಾಡುತ್ತೇನೆ ಎಂದು ಹೇಳಿದ್ದು ಇಡೀ ಸಾಹಿತ್ಯ ಸಮ್ಮೇಳನ ಒಂದು ಗುಂಪಿನ ಸಮ್ಮೇಳನ ಎಂಬುದಕ್ಕೇ ಪ್ರಜ್ಞಾವಂತ ಪ್ರೇಕ್ಷಕರಿಗೆ ಪುರಾವೆ ಒದಗಿಸಿದಂತಾಯ್ತು. ಅಷ್ಟಕ್ಕೂ ಯಾರೂ ಶ್ರೀಪಾದ್ ಶೆಟ್ಟರ ಮೇಲೆ ದುಡ್ಡುಕೊಟ್ಟು ಅಧ್ಯಕ್ಷರಾಗಿದ್ದಾರೆ ಅಂತ, ಆರೋಪ ಮಾಡಿರಲಿಲ್ಲ. ಹಾಗಿದ್ದ ಮೇಲೂ ಶ್ರೀಪಾದ್ ಶೆಟ್ಟರು ಕನ್ನಡ ತೆರನ್ನೆಳೆಯುವ ಪುಣ್ಯ ವೇದಿಕೆಯ ಮೇಲೆ ಬೀಪಿ ಎರಿಸಿಕೊಂಡಿದ್ದೇಕೆ ಅನ್ನೋದೇ ಯಕ್ಷ ಪ್ರಶ್ನೆಯಾಗಿ ಮುನ್ನೆಲೆಗೆ ಬಂತು.
ನಾಲ್ಕು ತಾಸು ಉದ್ಘಾಟನಾ ಸಮಾರಂಭ.. ಸಾಹಿತ್ಯ ಪ್ರೇಮಿಗಳಿಗೆ ನಿರಾಸೆ..!
ಇನ್ನು ಉದ್ಘಾಟನಾ ಸಮಾರಂಭ ಬರೋಬ್ಬರಿ 4ತಾಸು ನಡೆದಿದ್ದು ಸಮ್ಮೇಳನಕ್ಕೆ ಆಗಮಿಸಿದ್ದ ಸಾಹಿತ್ಯ ಪ್ರೇಮಿಗಳ ನಿರಾಸೆಗೆ ಕಾರಣವಾಯ್ತು. ಸರ್ವಾಧ್ಯಕ್ಷರ ಭಾಷಣದ ಪಾಳಿ ಮೂರು ಗಂಟೆಯಾದರೂ ಬರದೇ ಹೋದ್ದದನ್ನು ನೋಡಿ ಬಹು ಆಸಕ್ತಿಯಿಂದ ಹಣಕೊಟ್ಟು ಅಭಿಮಾನದಿಂದ ಬಂದ ಶಿಕ್ಷಕ ಸಮೂಹ ಹಸಿವು ತಾಳಲಾಗದೇ ಅಡಿಗೆ ಮನೆಯತ್ತ ಒಬ್ಬೊಬ್ಬರಾಗಿ ಓಡಿದ್ದನ್ನು ನೋಡಿದ್ರೆ, ಅಯ್ಯೋ ಎನಿಸುತ್ತಿತ್ತು. ಕೊನೆಗೆ ಸರ್ವಾಧ್ಯಕ್ಷರ ಭಾಷಣ ಬಂದಾಗ ಖಾಲಿ ಕುರ್ಚಿಗಳು ಕಾಣಿಸ ತೊಡಗಿದ್ದು, ಸಂಘಟಕರಲ್ಲಿ ದಿಗ್ಭ್ರಮೆ ಉಂಟು ಮಾಡಿದ್ದು ಸುಳ್ಳಲ್ಲ..