ಕರ್ಮಭೂಮಿ ಎಕ್ಸ್‌ಪ್ರೆಸ್‌ನಿಂದ ಬಿದ್ದು ಇಬ್ಬರು ಮೃತ, ಒಬ್ಬರು ಗಂಭೀರವಾಗಿ ಗಾಯ

ನಾಸಿಕ್, ಅಕ್ಟೋಬರ್ 19: ಮಹಾರಾಷ್ಟ್ರದ ನಾಸಿಕ್ ರೈಲು ನಿಲ್ದಾಣದ ಬಳಿ ಶನಿವಾರ ತಡರಾತ್ರಿ ಭೀಕರ ರೈಲು ಅಪಘಾತ ಸಂಭವಿಸಿದೆ. ಛಠ್ ಪೂಜೆಗೆಂದು ಮನೆಗೆ ತೆರಳುತ್ತಿದ್ದ ಮೂವರು ಪ್ರಯಾಣಿಕರು ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನಿಂದ ಬಿದ್ದು ಬಲಿಯಾಗಿದ್ದಾರೆ. ಇದರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರಿಗೆ ಗಂಭೀರ ಗಾಯವಾಗಿದೆ.

ಮಾಹಿತಿಯ ಪ್ರಕಾರ, ಆ ರೈಲು ನಾಸಿಕ್ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಆದರೆ ರೈಲು ನಿಲ್ದಾಣದ ಹತ್ತಿರ ನಿಧಾನವಾಗಿ ಸಂಚರಿಸುತ್ತಿದ್ದ ವೇಳೆ ಮೂವರು ರೈಲು ಹತ್ತಲು ಪ್ರಯತ್ನಿಸಿ ಕೆಳಗೆ ಬಿದ್ದಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಘಟನೆಯ ಮಾಹಿತಿ ಸಿಕ್ಕ ತಕ್ಷಣ, ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿತು. ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಓಧಾ ರೈಲು ನಿಲ್ದಾಣದ ವ್ಯವಸ್ಥಾಪಕ ಆಕಾಶ್ ಅವರು ನಾಸಿಕ್ ರಸ್ತೆ ರೈಲ್ವೆ ಇಲಾಖೆಗೆ ಮಾಹಿತಿ ನೀಡಿ, ರೈಲು ಹೊರಟ ಕೆಲವೇ ಕ್ಷಣಗಳ ಬಳಿಕ ಧಿಕಲೆ ನಗರ ಪ್ರದೇಶದ ಜೈಲ್ ರಸ್ತೆ ಹನುಮಾನ್ ದೇವಸ್ಥಾನದ ಬಳಿ ಮೂವರು ಯುವಕರು ಬಿದ್ದಿರುವುದಾಗಿ ತಿಳಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮಾಲಿ, ಕಾನ್ಸ್‌ಟೇಬಲ್ ಭೋಲೆ ಹಾಗೂ ನಾಸಿಕ್ ರಸ್ತೆ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಜಿತೇಂದ್ರ ಸಪ್ಕಲೆ ಅವರ ನೇತೃತ್ವದ ತಂಡ ಕೈಗೊಂಡಿದೆ.