ಅನುದಾನ ಬಿಡುಗಡೆ ಆಗದಿದ್ದರೆ ರಾಜಕೀಯ ನಿವೃತ್ತಿ – ಯಾವ ಪಕ್ಷಕ್ಕೂ ಸೇರುವುದಿಲ್ಲ: ಶಾಸಕ ಸತೀಶ್ ಸೈಲ್!

ಕಾರವಾರ, ಅಕ್ಟೋಬರ್ 14: “ಮುಖ್ಯಮಂತ್ರಿಗಳು ಮಾರ್ಚ್‌ಗೊಳಗೆ ಅನುದಾನ ಬಿಡುಗಡೆ ಮಾಡದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ,” ಎಂದು ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಸದಾಶಿವಗಡದ ಕಾಳಿ ಸಂಗಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ನಾನು ಕಳೆದ ಮೂರು ವರ್ಷಗಳಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ. ಆದರೆ ಇದುವರೆಗೆ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ, ಘೋಷಣೆಯೂ ಆಗಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು. “ಜನರು ಚಿಕಿತ್ಸೆಗಾಗಿ ಗೋವಾಕ್ಕೆ ಹೋಗಬೇಕಾಗುತ್ತದೆ. ನಾನೇ ನನ್ನ ಚಿಕಿತ್ಸೆಗೆ ದೆಹಲಿಗೆ ಹೋಗಬೇಕಾಯಿತು. ಹೀಗಾಗಿ ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅತ್ಯಂತ ಅಗತ್ಯ. ನಾನು ಈ ಆಸ್ಪತ್ರೆ ಆಗಿಯೇ ತೀರುತ್ತೇನೆ,” ಎಂದು ಶಪಥ ಮಾಡಿದರು.

ಅವರು ಮುಂದುವರೆದು, “ಮಾರ್ಚ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಘೋಷಣೆ ಆಗಬೇಕು. ಆಗದಿದ್ದರೆ ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ. ರಾಜೀನಾಮೆ ನೀಡಿ ಮನೆಯಲ್ಲಿ ಇರುತ್ತೇನೆ, ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನಾನು ಜನರಿಗಾಗಿ ಯೋಗ್ಯನಲ್ಲ ಎಂದು ಒಪ್ಪಿಕೊಳ್ಳುತ್ತೇನೆ,” ಎಂದಿದ್ದಾರೆ. ಮೂರು ವರ್ಷಗಳಿಂದ ಈ ಕುರಿತು ನಿರಂತರ ಮನವಿ ಸಲ್ಲಿಸಿದರೂ ಅನುದಾನ ನೀಡದಿರುವ ಸರ್ಕಾರದ ನಿರ್ಲಕ್ಷ್ಯವನ್ನು ಅವರು ತೀವ್ರವಾಗಿ ಟೀಕಿಸಿದ್ದಾರೆ.