ಮಣ್ಣಿಗೆ ಮಣ್ಣಾದ ಹಾಸ್ಯ ಮಾಂತ್ರಿಕ ರಾಜು ತಾಳಿಕೋಟೆ – ಪಾರ್ಥಿವ ಶರೀರದ ಮುಂದೆ ಕಣ್ಣೀರಿಟ್ಟ ಸಹ ಕಲಾವಿದರು!

ವಿಜಯಪುರ, ಅಕ್ಟೋಬರ್ 14: ನಗುವಿನ ನಶೆಯಲ್ಲಿ ತೇಲಿಸುತ್ತ, ಜನರನ್ನು ನಕ್ಕು ನಗಿಸುತ್ತಿದ್ದ ಹಾಸ್ಯ ಮಾಂತ್ರಿಕ ಡಾ. ರಾಜು ತಾಳಿಕೋಟೆ ಅವರ ಅಕಾಲಿಕ ನಿಧನ ಇಡೀ ಹಾಸ್ಯ ರಂಗಕ್ಕೆ ದೊಡ್ಡ ಆಘಾತ ತಂದಿದೆ. ಹಠಾತ್ ಹೃದಯಾಘಾತದಿಂದ ಅವರು ಕಾಲವಾದಿದ್ದು, ಚಿತ್ರರಂಗ ಮತ್ತು ರಂಗಭೂಮಿಯ ಕಲಾವಿದರು ದುಃಖದಲ್ಲಿದ್ದಾರೆ. ‘ಕಲಿಯುಗದ ಕುಡುಕ’ ಎಂದು ಖ್ಯಾತಿ ಪಡೆದ ಹಿರಿಯ ನಟ, ನಿರ್ದೇಶಕ ಹಾಗೂ ರಂಗಭೂಮಿ ತಾರೆ ಡಾ. ರಾಜು ತಾಳಿಕೋಟೆ ಬದುಕಿನ ನಾಟಕಕ್ಕೆ ವಿದಾಯ ಹೇಳಿದ್ದಾರೆ. ನಿನ್ನೆ ಶೈನ್ ಶೆಟ್ಟಿ ನಟನೆಯ ಶಂಕರಾಭರಣ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿ ಸಂಜೆ ವಿಶ್ರಾಂತಿ ಪಡೆಯುವಾಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ರಾಜು ತಾಳಿಕೋಟೆ ಅವರ ನಿಜನಾಮ ರಾಜೇಸಾಬ್ ಮುಕ್ತಂಸಾಬ್ ಯಂಕಂಚಿ. ಇಸ್ಲಾಂ ಧರ್ಮದವರಾದರೂ “ರಾಜು” ಎಂಬ ಹೆಸರಿನಿಂದಲೇ ಪ್ರಖ್ಯಾತಿ ಪಡೆದಿದ್ದರು. ಸರಳ, ನಿಸ್ವಾರ್ಥ ಬದುಕು ನಡೆಸಿದ ಅವರು ಇಬ್ಬರು ಪತ್ನಿಯರು ಹಾಗೂ ಐದು ಮಕ್ಕಳನ್ನು ಅಗಲಿದ್ದಾರೆ. ಯುವ ಪೀಳಿಗೆಗೆ ನಾಟಕದ ಆಸಕ್ತಿ ಬೆಳೆಸುವ ಉದ್ದೇಶದಿಂದ ಸ್ವಂತ ರಂಗಮಂದಿರ ನಿರ್ಮಿಸಿದ್ದ ಅವರು, ಧಾರವಾಡದ ರಂಗಾಯಣ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯದ ವಿವಿಧ ಭಾಗಗಳಲ್ಲಿ ಹೊಸ ತಂಡಗಳನ್ನು ರಚಿಸಿ ನಾಟಕಗಳ ಪ್ರದರ್ಶನ ಮಾಡಿಸುತ್ತಿದ್ದರು.

ರಂಗಭೂಮಿಯಲ್ಲಷ್ಟೇ ಅಲ್ಲದೆ ಚಲನಚಿತ್ರ ಕ್ಷೇತ್ರದಲ್ಲೂ ತಮ್ಮ ವಿಶಿಷ್ಟ ಶೈಲಿಯಿಂದ ಗುರುತಿಸಿಕೊಂಡಿದ್ದ ಅವರು, “ಹಾಸ್ಯ ರತ್ನಾಕರ”, “ಕಾಮಿಡಿ ಕಿಂಗ್”, “ಕೆಸೇಟ್ ಕಿಂಗ್” ಮುಂತಾದ ಬಿರುದುಗಳನ್ನು ಪಡೆದಿದ್ದರು. ಅವರ ಪಾರ್ಥಿವ ಶರೀರವನ್ನು ಧಾರವಾಡದ ರಂಗಾಯಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು, ಜಿಲ್ಲಾಧಿಕಾರಿ, ಸಿಇಒ ಸೇರಿದಂತೆ ಅನೇಕ ಕಲಾವಿದರು ಅಂತಿಮ ನಮನ ಸಲ್ಲಿಸಿದರು. ನಂತರ ರಾಜು ತಾಳಿಕೋಟೆಯ ಪಾರ್ಥಿವ ದೇಹವನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿರುವ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಂತ್ಯಸಂಸ್ಕಾರ ವೇಳೆ ಕುಟುಂಬದವರು ಹಾಗೂ ಸಹ ಕಲಾವಿದರು ಕಣ್ಣೀರಲ್ಲಿ ಮುಳುಗಿದ್ದರು. ಒಟ್ಟಾರೆ, ನಗುವಿನ ನಶೆಯಲ್ಲಿ ಜನಮನ ಗೆದ್ದ ರಾಜು ತಾಳಿಕೋಟೆಯ ನಿಧನವು ಕನ್ನಡ ರಂಗಭೂಮಿ ಮತ್ತು ಚಿತ್ರರಂಗಕ್ಕೆ ತುಂಬಲಾರದ ನಷ್ಟ ತಂದಿದೆ.