ಭಟ್ಕಳ – ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂಡಳ್ಳಿ ನಂ–1

ಭಟ್ಕಳ :
ಮಕ್ಕಳ ಸಂತೆಯು ವಿದ್ಯಾರ್ಥಿಗಳ ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ವ್ಯಾವಹಾರಿಕ ಜಾಣ್ಮೆಯಿಂದ ಜನರ ಮೆಚ್ಚುಗೆಗೆ ಪಾತ್ರವಾಯಿತು. ವಿದ್ಯಾರ್ಥಿಗಳು ತೋರಿದ ಚೌಕಾಸಿ ವ್ಯವಹಾರ, ಲೆಕ್ಕಾಚಾರ ಹಾಗೂ ಗ್ರಾಹಕರೊಂದಿಗೆ ಸಂವಹನದ ಕೌಶಲ್ಯಗಳಿಗೆ ಸಾರ್ವಜನಿಕರು ಭೇಷ್ ಎಂದರು.

ತಾಲ್ಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂಡಳ್ಳಿ ನಂ–1ರಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ ಈ ಮನಮೋಹಕ ದೃಶ್ಯಗಳು ಕಂಡುಬಂದವು. ಕಾರ್ಯಕ್ರಮವನ್ನು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೇಶ್ ನಾಯ್ಕ ಉದ್ಘಾಟಿಸಿ ಮಾತನಾಡಿ, “ಮಕ್ಕಳಿಗೆ ಪಠ್ಯಜ್ಞಾನ ಮಾತ್ರವಲ್ಲದೆ ವ್ಯಾವಹಾರಿಕ ಜ್ಞಾನವೂ ಅಗತ್ಯ. ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಅವರು ಲೆಕ್ಕಾಚಾರ, ಗ್ರಾಹಕ ವ್ಯವಹಾರ ಹಾಗೂ ಸ್ವಾವಲಂಬನೆಯ ಪಾಠಗಳನ್ನು ಕಲಿಯುತ್ತಾರೆ. ಮಕ್ಕಳ ಸಂತೆ ವಿನೋದಕ್ಕೆ ಮಾತ್ರ ಸೀಮಿತವಲ್ಲ; ಇದು ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕ” ಎಂದು ಹೇಳಿದರು.
ಮಕ್ಕಳು ಚುರುಮುರಿ, ಬೇಲ್‌ಪುರಿ, ಪಾನಿಪೂರಿ, ಸೌತೇಕಾಯಿ, ಹಣ್ಣಿನ ಜ್ಯೂಸ್, ಕುರುಕಲು ತಿಂಡಿಗಳು, ಸಿಹಿ ತಿನಿಸುಗಳು, ಚಿಪ್ಸ್, ಮಸಾಲ ಮಜ್ಜಿಗೆ, ರವೆ ಉಂಡೆ, ಹೆಸರುಬೇಳೆ ಸೇರಿದಂತೆ ವಿವಿಧ ಆಹಾರ ಮಳಿಗೆಗಳನ್ನು ಸ್ಥಾಪಿಸಿ ವ್ಯಾಪಾರ ನಡೆಸಿದರು. ಮನೆಗಳಲ್ಲಿ ತಯಾರಿಸಿದ ತಿನಿಸುಗಳನ್ನು ಮಾರಾಟ ಮಾಡುವಾಗ ವಿದ್ಯಾರ್ಥಿಗಳು ತೋರಿದ ಜಾಣ್ಮೆ ಪೋಷಕರೂ ಗ್ರಾಮಸ್ಥರ ಗಮನ ಸೆಳೆಯಿತು. ಸರ್ಕಾರಿ ಶಾಲೆಯ ಮಕ್ಕಳ ಸಂತೆಗೆ ಪೋಷಕರು ಸ್ವಯಂಪ್ರೇರಿತವಾಗಿ ಸಹಕಾರ ನೀಡಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಮಕ್ಕಳು, ಪೋಷಕರು, ಶಿಕ್ಷಕರು ಹಾಗೂ ಗ್ರಾಮಸ್ಥರು ವಿವಿಧ ತಿನಿಸುಗಳನ್ನು ಸವಿದರು. ಸಂತೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು, “ನಾವು ಸ್ವತಃ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಿದ್ದು ಸಂತಸ ತಂದಿದೆ. ಇಲ್ಲಿ ಕಲಿತ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಇದು ಉತ್ತಮ ವೇದಿಕೆ” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಶಿಧರ್ ನಾಯ್ಕ, ಉಪಾಧ್ಯಕ್ಷ ಜಗದೀಶ್ ಆಚಾರಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಪವಿತ್ರಾ ಮೊಗೇರ,ನಿವೃತ್ತ ಅಂಚೆ ಅಧಿಕಾರಿ ನಾರಾಯಣ ದೊಡ್ಮನೆ,ದಿನೇಶ್ ನಾಯ್ಕ,ಮುಖ್ಯ ಶಿಕ್ಷಕಿ ಪಾರ್ವತಿ ದೇವಡಿಗ, ಶಿಕ್ಷಕ ಗಣೇಶ ಹೆಗಡೆ,ಸೇರಿದಂತೆ ಶಾಲೆಯ ಶಿಕ್ಷಕರು, ಎಸ್.ಡಿ.ಎಂ.ಸಿ ಸರ್ವ ಸದಸ್ಯರು ಹಾಗೂ ಪಾಲಕರು ಉಪಸ್ಥಿತರಿದ್ದರು.

