ಮೃತ ಮಹಿಳೆಯ ಸಹೋದರ ಹಾಗೂ ಸಂಬಂಧಿಕರಿಂದ ಆಸ್ಪತ್ರೆಯ ಎದುರು ಪ್ರತಿಭಟನೆ: ಆರ್.ಟಿ.ಐ. ಸಾಮಾಜಿಕ ಕಾರ್ಯಕರ್ತರಿಂದ ಕುಟುಂಬಸ್ಥರಿಗೆ ಸಾಥ್
ಭಟ್ಕಳ: ಭಟ್ಕಳ ತಾಲೂಕಿನ ಕಟಗಾರಕೊಪ್ಪ ಅತ್ತಿಬಾರದ ತನ್ನ ಗಂಡನ ಮನೆಯ ತೋಟದ ಬಾವಿಯಲ್ಲಿ ಬಿದ್ದು ಮಹಿಳೆಯೋರ್ವಳು ಅನುಮಾನಾಸ್ಪದವಾಗಿ ಸಾವನಪ್ಪಿದ್ದಾಳೆ ಎಂದು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಮೃತಳ ಸಹೋದರ ಜನ್ನ ಗೊಂಡ ಪ್ರಕರಣ ದಾಖಲಿಸಿದ ಘಟನೆ ವರದಿಯಾಗಿದೆ.
ಮೃತ ಮಹಿಳೆ ಲಕ್ಷ್ಮೀ ವೆಂಕಟೇಶ ಗೊಂಡ (೩೨) ಎಂದು ತಿಳಿದು ಬಂದಿದೆ. ಈಕೆ ಕಳೆದ ಒಂದುವರೆ ವರ್ಷದ ಹಿಂದೆ ಮುರ್ಡೇಶ್ವರದ ಕಟಗಾರಕೊಪ್ಪದ ಅತ್ತಿಬಾರ ಗ್ರಾಮದ ವೆಂಕಟೇಶ ರಾಮಾ ಗೊಂಡ ಜೊತೆ ಮದುವೆ ಆಗಿದ್ದಳು. ಭಾನುವಾರದಂದು ರಾತ್ರಿ ೭ ರಿಂದ ೭.೩೦ ರ ಸುಮಾರಿಗೆ ಅತ್ತಿಬಾರದ ತೋಟದ ಬಾವಿಯಲ್ಲಿ ಬಿದ್ದು ಮೃತ ಪಟ್ಟಿದ್ದಾಳೆ. ಆದರೆ ತನ್ನ ಅಕ್ಕ ಯಾವ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ನನಗೆ ಅನುಮಾನವಿದ್ದು, ಸಾವಿಗೆ ನಿಜವಾದ ಕಾರಣವನ್ನು ತಿಳಿಯಲು ತನಿಖೆ ಮಾಡಬೇಕೆಂದು ಮುರುಡೇಶ್ವರ ಪೋಲಿಸ ಠಾಣೆಯಲ್ಲಿ ಮೃತ ಮಹಿಳೆಯ ಸೋಹದರ ಜನ್ನ ತಿಮ್ಮಪ್ಪ ಗೊಂಡ ದೂರು ದಾಖಲಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ತಹಶೀಲ್ದಾರ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಸಿಪಿಐ ಸಂತೋಷ ಕಾಯ್ಕಿಣಿ, ಪಿಎಸೈ ಮಂಜುನಾಥ ಹಾಗೂ ಪೋಲೀಸ ಸಿಬ್ಬಂದಿಗಳು ಅತ್ತಿಬಾರ ಗ್ರಾಮದ ಮೃತಳ ಮನೆಗೆ ತೆರಳಿ ಸ್ಥಳ ಪರಿಶೀಲನೆ ಮಾಡಿ ಪಂಚನಾಮೆಯನ್ನು ನಡೆಸಲಾಯಿತು. ನಂತರ ಮೃತ ದೇಹವನ್ನು ಮುರುಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಗಿದ್ದು, ಸೋಮವಾರದಂದು ಮೃತಳ ಮರಣೋತ್ತರ ಪರೀಕ್ಷೆಯನ್ನು ಆಸ್ಪತ್ರೆಯ ವೈದ್ಯರು ನಡೆಸಿದರು.
ಈ ವೇಳೆ ಆಸ್ಪತ್ರೆಯತ್ತ ಜಮಾಯಿಸಿದ ಮೃತಳ ತಂದೆಯ ಕುಟುಂಬದವರು ಸಂಬಂಧಿಕರು ನ್ಯಾಯಕ್ಕಾಗಿ ಆಸ್ಪತ್ರೆಯ ಮುಂದೆ ಪ್ರತಿಭಟಿಸಿದರು. ಸ್ಥಳಕ್ಕೆ ಬಂದ ಪಿಎಸೈ ಮಂಜುನಾಥ ಹಾಗೂ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಪದಾಧಿಕಾರಿಗಳ ಜೊತೆಗೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಮೃತಳ ತಮ್ಮ ಹಾಗೂ ಕುಟುಂಬದವರು ಅನುಮಾನಾಸ್ಪದ ಸಾವಿನ ಬಗ್ಗೆ ದೂರು ನೀಡಿದ್ದು ಗಂಡನ ಕುಟುಂಬದವರನ್ನು ಬಂಧಿಸಿ ಅವರಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸಿದರು.
ಅನುಮಾನಾಸ್ಪದ ಸಾವು ಎಂಬುದಾಗಿ ದೂರಿನಲ್ಲಿ ದಾಖಲಿಸಿಕೊಂಡಿದ್ದು ಈ ಬಗ್ಗೆ ಕುಟುಂಬದವರಿಗೆ ಹಿಂಬರಹ ಸಹ ನೀಡಲಿದ್ದೇನೆ ಹಾಗೂ ಮೃತಳ ಗಂಡನ ಮನೆಯವರ ತನಿಖೆ ಸಹ ಮಾಡಲಿದ್ದು ಪೋಲೀಸರ ಮೇಲೆ ನಂಬಿಕೆಯಿಡಿ ಎಂದು ಹೇಳಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ದೂರುದಾರ ಜನ್ನ ಗೊಂಡ ಭಾನುವಾರದಂದು ಸಹೋದರಿಯ ಮನೆ ಅವರಿಂದ ದೂರವಾಣಿ ಕರೆ ಬಂದು ಮೃತ ಸಹೋದರಿ ಮನೆಯಲ್ಲಿ ಕಾಣಿಸುತ್ತಿಲ್ಲ ಎಂದು ಹೇಳಿದ ಹಿನ್ನೆಲೆ ತಕ್ಷಣಕ್ಕೆ ಮೃತಳ ಸಹೋದರ ಅತ್ತಿಬಾರಕ್ಕೆ ತೆರಳಿದ್ದ. ಈ ವೇಳೆ ಆಕೆಯ ಮನೆಯ ಹೊರಗಡೆ ಆಕೆಯ ಮೃತ ದೇಹವನ್ನು ಮಲಗಿಸಿದ್ದು, ಆಕೆಯ ಕಿವಿ, ಮೂಗು ಬಾಯಿಯಿಂದ ರಕ್ತ ಬರುತ್ತಿದ್ದ ರೀತಿಯಲ್ಲಿ ಕಂಡು ಬಂತು. ಆಕೆಯು ತೋಟದ ಬಾವಿಯಲ್ಲಿ ಬಿದ್ದಿದ್ದಾಳೆಂದು ಆಕೆಯ ಗಂಡನ ಮನೆ ಅವರು ತಿಳಿಸಿದರು. ಈ ಹಿಂದೆ ನನ್ನ ಅಕ್ಕನಿಗೆ ಸಾಕಷ್ಟು ಬಾರಿ ಗಂಡನ ತಾಯಿ (ಅತ್ತೆ) ಕಿರುಕುಳ ನೀಡುತ್ತಿದ್ದಾಳೆಂದು ನಮ್ಮ ಗಮನಕ್ಕೆ ತಿಳಿಸಿದ್ದು ನಂತರ ಆಕೆಯು ಸುಧಾರಿಸಿಕೊಂಡು ಹೋಗುತ್ತೇನೆಂದು ಹೇಳಿ ಮೃತ ಸಹೋದರಿ ತಿಳಿಸಿದ್ದಳು ಎಂದು ಪ್ರತಿಕ್ರಿಯೆ ನೀಡಿದ್ದಾನೆ.
ಮೃತಳ ಮಹಿಳೆಯ ಪತಿ ವಿಷ ಸೇವಿಸಿ ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲು:
ಮೃತ ಮಹಿಳೆಯ ಪತಿ ವೆಂಕಟೇಶ ರಾಮಾ ಗೊಂಡ ಅವನು ಪತ್ನಿ ಸಾವಿನ ವಿಚಾರ ತಿಳಿದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಆತನ ಕುಟುಂಬದವರು ಆತನನ್ನು ರಕ್ಷಿಸಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆತಂದು ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.
ಉದಯ ನಾಯ್ಕ ನುಡಿಸಿರಿ ನ್ಯೂಸ್, ಭಟ್ಕಳ