ಕೇಂದ್ರ ಸರ್ಕಾರವು ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗಳಾದ E22 ರಿಂದ E30 ವರೆಗಿನ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ರದ್ದುಗೊಳಿಸಿದೆ. ಆದರೆ ಪ್ರಸ್ತುತ ದೇಶದಾದ್ಯಂತ ಬಳಕೆಯಲ್ಲಿರುವ E20 ಪೆಟ್ರೋಲ್ ದರದಲ್ಲಿ ಈ ನಿರ್ಧಾರದಿಂದ ತಕ್ಷಣದ ಇಳಿಕೆ ಕಂಡುಬರುವ ಸಾಧ್ಯತೆ ಕಡಿಮೆ. ಭಾರತದ ಎಥೆನಾಲ್ ಮಿಶ್ರಣ ಗುರಿಯನ್ನು ಮತ್ತಷ್ಟು ವೇಗಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ರೈತರ ಆದಾಯ ಹೆಚ್ಚಳ, ಕಚ್ಚಾ ತೈಲ ಆಮದು ಅವಲಂಬನೆ ಹಾಗೂ ವೆಚ್ಚದಲ್ಲಿ ಕಡಿತ, ಜೊತೆಗೆ ದೇಶದ ಆರ್ಥಿಕತೆಗೆ ದೀರ್ಘಾವಧಿಯಲ್ಲಿ ಲಾಭವಾಗುವ ನಿರೀಕ್ಷೆಯಿದೆ.

ನವದೆಹಲಿ:
ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪೂರ್ಣ ರದ್ದುಗೊಳಿಸಿದೆ. ಆದರೆ, ಸಾಮಾನ್ಯ ಗ್ರಾಹಕರು ಪೆಟ್ರೋಲ್ನ ಬೆಲೆಯಲ್ಲಿ ತಕ್ಷಣಕ್ಕೆ ಯಾವುದೇ ಇಳಿಕೆಯಾಗುವುದಿಲ್ಲ. ಹಣಕಾಸು ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಈ ಅಬಕಾರಿ ಸುಂಕ ವಿನಾಯಿತಿಯು ಕೇವಲ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗೆ ಮಾತ್ರ ಅನ್ವಯಿಸುತ್ತದೆ.
ಇ22, ಇ25, ಇ27 ಮತ್ತು ಇ30 ಪೆಟ್ರೋಲ್‌ಗೆ (ಅಂದರೆ ಶೇ. 22 ರಿಂದ ಶೇ. 30 ರವರೆಗೆ ಎಥೆನಾಲ್ ಹೊಂದಿರುವ ಇಂಧನ ಮಿಶ್ರಣಗಳು) ಮಾತ್ರ ಅಬಕಾರಿ ಸುಂಕವನ್ನು ಶೂನ್ಯ ಮಾಡಲಾಗಿದೆ. ಸದ್ಯಕ್ಕೆ ಭಾರತದ ಬಹುತೇಕ ಬಂಕ್‌ಗಳಲ್ಲಿ ಸಿಗುತ್ತಿರುವುದು ಇ20 (ಶೇ. 20 ಎಥೆನಾಲ್) ಪೆಟ್ರೋಲ್ ಆಗಿದೆ. ಇದಕ್ಕೆ ಈ ಹೊಸ ವಿನಾಯಿತಿ ಅನ್ವಯಿಸುವುದಿಲ್ಲ.
ಗ್ರಾಹಕರ ಮೇಲಿನ ಪರಿಣಾಮವೇನು? ಪೆಟ್ರೋಲ್ ದರ ಇಳಿಯುವುದೇ?
ತಜ್ಞರ ಪ್ರಕಾರ, ಸಾಮಾನ್ಯ ವಾಹನ ಸವಾರರ ಮೇಲೆ ತಕ್ಷಣಕ್ಕೆ ಇದರ ನೇರ ಪರಿಣಾಮ ಬೀರುವುದಿಲ್ಲ. ಏಕೆಂದರೆ ಶೇ. 22 ಕ್ಕಿಂತ ಹೆಚ್ಚು ಎಥನಾಲ್ ಹೊಂದಿರುವ ಇಂಧನಗಳು ಇನ್ನು ದೇಶಾದ್ಯಂತ ವ್ಯಾಪಕವಾಗಿ ಮಾರುಕಟ್ಟೆಗೆ ಬರಬೇಕಿದೆ.
ಹೆಚ್ಚು ಎಥನಾಲ್ ಮಿಶ್ರಿತ ಇಂಧನವು ಮಾರುಕಟ್ಟೆ ಬಂದರೂ ಬೆಲೆ ಕಡಿಮೆ ಆಗುತ್ತದೆ ಎಂದು ಖಾತ್ರಿ ಇಲ್ಲ. ಯಾಕೆಂದರೆ ಕೈಗಾರಿಕಾ ತ್ಯಾಜ್ಯಗಳಿಂದ ಸಿಗುವ ಎಥನಾಲ್ ಅನ್ನು ಪಡೆಯಲು ಮಾಡುವ ವೆಚ್ಚ ಸಂಸ್ಕರಿತ ಪೆಟ್ರೋಲ್‌ಗಿಂತ ಕಡಿಮೆ ಏನಿಲ್ಲ. ಹೀಗಾಗಿ, ಪೆಟ್ರೋಲ್ ಬೆಲೆ ಸದ್ಯಕ್ಕೆ ಇಳಿಕೆ ಕಾಣುವ ಸಾಧ್ಯತೆ ಬಹಳ ಕಡಿಮೆ.
ಸರ್ಕಾರದ ಈ ಕ್ರಮಕ್ಕೆ ಪ್ರಮುಖ ಕಾರಣಗಳು
ಇತ್ತೀಚೆಗಷ್ಟೇ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಇ30 ಇಂಧನಕ್ಕೆ ಹೊಸ ಸುರಕ್ಷತಾ ಮತ್ತು ಗುಣಮಟ್ಟದ ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಭವಿಷ್ಯದಲ್ಲಿ ದೇಶವು ಶೇ. 30 ಎಥೆನಾಲ್ ಮಿಶ್ರಣದ ಗುರಿ ಹೊಂದಿದ್ದು, ಅದಕ್ಕೆ ಪೂರಕವಾಗಿ ತೈಲ ಕಂಪನಿಗಳಿಗೆ ಈ ತೆರಿಗೆ ವಿನಾಯಿತಿ ನೀಡಲಾಗಿದೆ.
ಎಥೆನಾಲ್ ಅನ್ನು ಕಬ್ಬು, ಜೋಳ ಹಾಗೂ ಧಾನ್ಯಗಳಿಂದ ತಯಾರಿಸುವುದರಿಂದ, ಇದರ ಬಳಕೆ ಹೆಚ್ಚಾದಂತೆ ದೇಶದ ರೈತರ ಆದಾಯ ಹೆಚ್ಚಾಗಲಿದೆ. ಹಾಗೆಯೇ, ಮತ್ತೊಂದು ಬಹಳ ಮುಖ್ಯವಾದ ಲಾಭ ಎಂದರೆ, ಆಮದು ವೆಚ್ಚ ಕಡಿಮೆ ಆಗುವುದು. ಅಂದರೆ, ಕಚ್ಚಾ ತೈಲದ ಆಮದು ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ವಿದೇಶಿ ವಿನಿಮಯದ ಮೇಲಿನ ಹೊರೆ ಕಡಿಮೆ ಆಗುತ್ತದೆ. ದೀರ್ಘಾವಧಿಯಲ್ಲಿ ಆರ್ಥಿಕತೆಯ ಮೇಲಿನ ಹೊರೆಯನ್ನೂ ತಗ್ಗಿಸುತ್ತದೆ.
ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲೆ ಅಬಕಾರಿ ಸುಂಕವನ್ನು ರದ್ದುಗೊಳಿಸುವ ಈ ನಿರ್ಧಾರದಿಂದ ನಮ್ಮ ಇಂದಿನ ಅಥವಾ ನಾಳೆಯ ಪೆಟ್ರೋಲ್ ಬಿಲ್ ಕಡಿಮೆ ಆಗುವುದಿಲ್ಲ. ಆದರೆ ಭವಿಷ್ಯದಲ್ಲಿ ಇ30 ಇಂಧನ ಲಭ್ಯವಾದಾಗ ಅದು ಸಾಮಾನ್ಯ ಪೆಟ್ರೋಲ್‌ಗಿಂತ ಸ್ವಲ್ಪ ಅಗ್ಗವಾಗಿ ಸಿಗುವ ಸಾಧ್ಯತೆ ಇರುತ್ತದೆ.
