ಇದು ಹೊಸ ವರ್ಷದ ಶುಭಾರಂಭದ ಸಂಕೇತ, ಪ್ರಕೃತಿಯ ಪುನರುಜ್ಜೀವನ ಹಾಗೂ ಸೃಷ್ಟಿಯ ಮಹತ್ವದ ದಿನ. ಅಭ್ಯಂಗ ಸ್ನಾನ, ಪಂಚಾಂಗ ಪೂಜೆ ಮತ್ತು ಬೇವು-ಬೆಲ್ಲ ಸೇವನೆಯ ಮೂಲಕ ಜೀವನದ ಸುಖ-ದುಃಖಗಳನ್ನು ಸಮತೋಲನದಿಂದ ಸ್ವೀಕರಿಸುವ ಸಂದೇಶವನ್ನು ನೀಡುತ್ತದೆ. ಯುಗಾದಿ ಆರೋಗ್ಯ, ಅದೃಷ್ಟ ಹಾಗೂ ಹೊಸ ಚೈತನ್ಯವನ್ನು ತರಿಸುವ ಸಮೃದ್ಧಿಯ ಹಬ್ಬವಾಗಿದೆ.

ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬಕ್ಕೆ ಅಗ್ರಮಾನ್ಯ ಸ್ಥಾನವಿದೆ. ಹೊಸ ವರ್ಷದ ಆರಂಭವನ್ನು ಸೂಚಿಸುವ ಈ ಹಬ್ಬವನ್ನು ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಭಿನ್ನತೆಯಿಂದ ಆಚರಿಸಲಾಗುತ್ತದೆ. ಯುಗಸ್ಯ ಆದಿ ಅಂದರೆ ಯುಗದ ಪ್ರಾರಂಭ ಎಂಬ ಅರ್ಥವನ್ನು ಹೊಂದಿರುವ ಯುಗಾದಿಯು ಪ್ರಕೃತಿಯಲ್ಲಿ ಹೊಸತನದ ಸಂಕೇತವಾಗಿ ನಿಲ್ಲುತ್ತದೆ. ಹಳೆಯ ಚಿಗುರನ್ನು ಬಿಟ್ಟು, ಹಳೆಯ ಎಲೆಗಳನ್ನು ಉದುರಿಸಿ ಹೊಸ ಚಿಗುರಿನಿಂದ ಪ್ರಕೃತಿ ಕಂಗೊಳಿಸುವ ವಸಂತ ಋತುವಿನಲ್ಲಿ ಯುಗಾದಿ ಬರುತ್ತದೆ.
ಇದು ಹೊಸ ಕಾಲ, ಹೊಸ ಪ್ರಾರಂಭವನ್ನು ಸೂಚಿಸುತ್ತದೆ. ಪ್ರಕೃತಿಯು ವಸಂತ ಋತುವಿನ ಆಗಮನದೊಂದಿಗೆ ಹೊಸ ಸಂವತ್ಸರದ ಜನ್ಮದಿನವನ್ನು ಆಚರಿಸುತ್ತದೆ. ಇದು ಪ್ರಕೃತಿಯ ಪುನರುಜ್ಜೀವನವನ್ನು ಪ್ರತಿನಿಧಿಸುತ್ತದೆ. ಮರಗಿಡಗಳು ಚಿಗುರಿ, ಹೂವು ಅರಳಿ, ಕೋಗಿಲೆ ಇಂಪಾದ ಗಾಯನದಿಂದ ವಾತಾವರಣವನ್ನು ತುಂಬುತ್ತದೆ.
ವಾರ, ತಿಥಿ, ನಕ್ಷತ್ರ, ಯೋಗ, ಕರಣಗಳ ವಿಚಾರವನ್ನು ಒಳಗೊಂಡಿರುವ ಪಂಚಾಂಗವನ್ನು ಪೂಜಿಸುವುದರಿಂದ ವರ್ಷವಿಡೀ ಶುಭ ಫಲಗಳು ಲಭಿಸಲಿ ಎಂದು ಪ್ರಾರ್ಥಿಸಲಾಗುತ್ತದೆ. ಸಂಧ್ಯಾಕಾಲದಲ್ಲಿ ಪಂಚಾಂಗ ಶ್ರವಣ ಮಾಡಲಾಗುತ್ತದೆ. ಪೂಜೆಯ ನಂತರ ಸಿಹಿ ಊಟ, ಅದರಲ್ಲೂ ಹೋಳಿಗೆ ಊಟವನ್ನು ಮಾಡುವುದು ವಾಡಿಕೆ.
ಪೂಜಾ ಕೈಂಕರ್ಯದಲ್ಲಿ ಬೇವು-ಬೆಲ್ಲ ನೈವೇದ್ಯಕ್ಕೆ ವಿಶೇಷ ಸ್ಥಾನವಿದೆ. ಇದು ಜೀವನದ ಕಷ್ಟ-ಸುಖಗಳ ಸಮತೋಲನವನ್ನು ತೋರಿಸುತ್ತದೆ. ಬೇವು ಕಹಿಯನ್ನೂ, ಬೆಲ್ಲ ಸಿಹಿಯನ್ನೂ ಪ್ರತಿನಿಧಿಸುತ್ತದೆ, ಜೀವನದಲ್ಲಿ ಇವೆರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶ ನೀಡುತ್ತದೆ. ಈ ಹಬ್ಬವು ಆರೋಗ್ಯ, ಅದೃಷ್ಟ, ಮಾನಸಿಕ, ವೈಜ್ಞಾನಿಕ ಮತ್ತು ಧಾರ್ಮಿಕವಾಗಿ ಹೊಸ ಚೈತನ್ಯ, ಶಕ್ತಿ ಮತ್ತು ಹೊಸತನವನ್ನು ನೀಡುತ್ತದೆ.
