ಅಪ್ಪು ಹುಟ್ಟುಹಬ್ಬ: ಭಟ್ಕಳದಲ್ಲಿ ಅಭಿಮಾನಿಗಳಿಂದ ಮಾನವೀಯ ಸೇವಾ ಕಾರ್ಯಕ್ರಮ

ಭಟ್ಕಳ:
ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ 51ನೇ ಜನ್ಮದಿನದ ಅಂಗವಾಗಿ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಸೇವಾದಳ, ಭಟ್ಕಳ ವತಿಯಿಂದ ಪಟ್ಟಣದ ಟ್ಯಾಕ್ಸಿ ನಿಲ್ದಾಣದಲ್ಲಿ ಉಚಿತ ಅನ್ನದಾನ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಯಿತು.

ಬೆಳಿಗ್ಗೆಯಿಂದ ನಡೆದ ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಬಳಿಕ ಸ್ನೇಹ ವಿಶೇಷ ಶಾಲೆಯ ವಿಶೇಷ ಚೇತನ ಮಕ್ಕಳಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಯಿತು. ಈ ವೇಳೆ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ನಂತರ ಭಟ್ಕಳದ ನೂರಾರು ಸಾರ್ವಜನಿಕರಿಗೆ ಅನ್ನದಾನ ವಿತರಿಸಲಾಯಿತು. ಅಪ್ಪು ಅಭಿಮಾನಿ ತಿಮ್ಮಯ್ಯ ನಾಯ್ಕ ಮಾತನಾಡಿ, ಪುನೀತ್ ಅವರು ಜೀವಂತವಾಗಿದ್ದಾಗ ಅನಾಥರು ಹಾಗೂ ನಿರ್ಗತಿಕರಿಗೆ ಆಶ್ರಯವಾಗಿದ್ದರು. ಅವರ ಆದರ್ಶವನ್ನು ಅನುಸರಿಸಿ ಜನತೆಗೆ ಒಂದು ಹೊತ್ತಿನ ಊಟ ನೀಡುವ ಮೂಲಕ ಸೇವೆ ಸಲ್ಲಿಸಿದ್ದೇವೆ. ಮುಂದಿನ ಪೀಳಿಗೆಯೂ ಈ ಕಾರ್ಯವನ್ನು ಮುಂದುವರಿಸಬೇಕು ಎಂಬುದು ನಮ್ಮ ಆಶಯ ಎಂದರು.

ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲೀಯಾನ್ ಮಾತನಾಡಿ, ಸಾವಿನ ಬಳಿಕವೂ ಒಬ್ಬ ವ್ಯಕ್ತಿಯ ಹುಟ್ಟುಹಬ್ಬವನ್ನು ಜನರು ಆಚರಿಸುತ್ತಿದ್ದಾರೆ ಎಂದರೆ ಅವರ ಸಾಧನೆಯ ಮಹತ್ವ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಪುನೀತ್ ಅವರು ತಮ್ಮ ದುಡಿಮೆಯ ಹಣದಲ್ಲಿ ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ. ಸಮಾಜಕ್ಕೆ ಹಾನಿಕಾರಕ ಜಾಹೀರಾತುಗಳಿಂದ ದೂರವಿದ್ದು, ನಂದಿನಿ ಹಾಲಿನಂತಹ ಉತ್ತಮ ಉತ್ಪನ್ನಗಳ ಪ್ರಚಾರ ಮಾಡಿದ್ದಾರೆ ಎಂದು ಹೇಳಿದರು. ಈ‌ ಸಂದರ್ಭದಲ್ಲಿ ಮುಖ್ಯ ಅಥಿತಿಗಳಿಗೆ ಸಂಘಟಕರಿಂದ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಕುಮಟಾ ರಕ್ತ ಕೇಂದ್ರದ ಡಾ.ನಾರಾಯಣ್ ಮುಡ್ಲಿಗಿರಿ, ಜೈ ಮಾರುತಿ ರಕ್ತದಾನಿ ಬಳಗದ ಗಣೇಶ ದೇವಡಿಗ್, ಸ್ನೇಹ ವಿಶೇಷ ಶಾಲೆಯ ಸಂಸ್ಥಾಪಕಿ ಮಾಲತಿ ಉದ್ಯಾವರ ಹಾಗೂ ಶಾಲಾ ಮಕ್ಕಳು, ಅಪ್ಪು ಅಭಿಮಾನಿಗಳಾದ ಸೂರ್ಯಕಾಂತ ನಾಯ್ಕ (ಬಾಬಣ್ಣ), ಗಣಪತಿ ನಾಯ್ಕ, ರೇವಂತ ನಾಯ್ಕ, ಸೀತಾರಾಮ ನಾಯ್ಕ, ಪಾಂಡು ನಾಯ್ಕ, ಅಭಿಷೇಕ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.