ನದಿ ಉಳಿಸುವ ಹೋರಾಟಕ್ಕೆ ಭಜನಾ ಸ್ಪೂರ್ತಿ: ಪತ್ರ ಚಳುವಳಿಗೆ ಸ್ವರ್ಣವಲ್ಲೀ ಶ್ರೀ ಚಾಲನೆ

ಶಿರಸಿ:
ಬೇಡ್ತಿ, ಅಘನಾಶಿನಿ ಮತ್ತು ಶಾಲ್ಮಲಾ ನದಿಗಳ ತಿರುವು ಯೋಜನೆಗಳನ್ನು ಕೈಬಿಡುವಂತೆ ಒತ್ತಾಯಿಸಿ, ಭಕ್ತರಲ್ಲಿ ಜಾಗೃತಿ ಮೂಡಿಸಲು ಹಾಗೂ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲು ಯುಗಾದಿಯಿಂದ ರಾಮನವಮಿಯವರೆಗೆ ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.

ನಗರದ ಯೋಗ ಮಂದಿರದಲ್ಲಿ ಯುಗಾದಿ ಹಬ್ಬದಂದು ನದಿ ಜೋಡಣೆ ವಿರೋಧಿಸಿ ಜಾಗೃತಿ ಭಜನಾ ಹಾಗೂ ಪತ್ರ ಚಳುವಳಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

“ಪೂಜೆ ಮತ್ತು ಭಜನೆಗಳು ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಿಗೊಳಿಸಿ ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆ ನೀಡುತ್ತವೆ. ಒಂಬತ್ತು ದಿನಗಳ ಕಾಲ ಪಟ್ಟಣ, ಗ್ರಾಮ ಹಾಗೂ ಸೀಮಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಈ ಅಭಿಯಾನ ನಡೆಯಲಿದೆ. ರಾಮನವಮಿಯ ಸಂದರ್ಭದಲ್ಲಿ ರಾಮನ ಭಜನೆ ಸೇರಿದಂತೆ ಯಾವುದೇ ದೇವರ ಭಜನೆ ಮಾಡಬಹುದು. ನದಿ ಜೋಡಣೆ ವಿರುದ್ಧ ಮಾಹಿತಿ ಹಂಚಿಕೊಳ್ಳುವುದರ ಜೊತೆಗೆ ಘೋಷಣೆಗಳನ್ನು ಕೂಗಬಹುದು,” ಎಂದು ತಿಳಿಸಿದರು.

ಇತ್ತೀಚೆಗೆ ಬೇಡ್ತಿ (ಗಂಗಾವಳಿ) ಮತ್ತು ಅಘನಾಶಿನಿ ನದಿಗಳಲ್ಲಿ ನಡೆದ ಪೂಜೆ ಹಾಗೂ ಗಂಗಾರತಿ ಕಾರ್ಯಕ್ರಮಗಳು ಚಳುವಳಿಗೆ ಬಲ ನೀಡಿರುವುದನ್ನು ಅವರು ಸ್ಮರಿಸಿದರು. ಭಜನಾ ಅಭಿಯಾನದ ವೇಳೆ ಸಹಿ ಸಂಗ್ರಹವೂ ನಡೆಯಲಿದೆ. ನದಿ ಸಂರಕ್ಷಣೆಗೆ ಬೆಂಬಲವಾಗಿ ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿ ಹಾಗೂ ಪ್ರಧಾನಿಗಳಿಗೆ ಪತ್ರ ಬರೆಯುವ ಮೂಲಕ ಪತ್ರ ಚಳುವಳಿಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಜೂನ್ 5ರ ವಿಶ್ವ ಪರಿಸರ ದಿನಾಚರಣೆಯಂದು “ನಮ್ಮ ನೀರು ನಮಗೇ ಬೇಕು” ಎಂಬ ಘೋಷಣೆಯೊಂದಿಗೆ ಎರಡೂ ನದಿ ಕೊಳ್ಳಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಅಶೀಸರ ನದಿ ಜೋಡಣೆ ಸಮಸ್ಯೆ, ಮುಂದಿನ ಹೋರಾಟ ಹಾಗೂ ನೂತನ ವೆಬ್‌ಸೈಟ್ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ಮಾತೃಮಂಡಳಿ ಅಧ್ಯಕ್ಷೆ ಗೀತಾ ಹೆಗಡೆ ಶೀಗೆಮನೆ, ಯೋಗ ಮಂದಿರದ ಸಿ.ಎಸ್. ಹೆಗಡೆ, ಉಪಾಧ್ಯ ಎಸ್.ಎನ್. ಭಟ್ಟ, ಭಾರತಿ ಹೆಗಡೆ, ಮಧುಮತಿ ಹೆಗಡೆ, ಕೇಶವ ಕೊರ್ಸೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ವೇಳೆ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ‘ಭಗೀರಥ ಡಾಟ್ ಕಾಮ್’ ವೆಬ್‌ಸೈಟ್‌ಗೆ ಶ್ರೀಗಳು ಚಾಲನೆ ನೀಡಿದರು.