ಕಾರವಾರಕ್ಕೆ ಕಲ್ವರಿ ಕ್ಲಾಸ್ ಸಬ್‌ಮೆರಿನ್ ಘಟಕ: ವಿಶೇಷತೆಗಳೇನು ತಿಳಿದುಕೊಳ್ಳಿ

ಕಾರವಾರ:

ದೇಶದಲ್ಲೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯಲ್ಲಿ ಕಲ್ವರಿ ವರ್ಗದ ಸಬ್‌ಮೆರಿನ್‌ಗಳ ನಿರ್ವಹಣೆಗೆ ವಿಶೇಷ ಘಟಕ ಆರಂಭಿಸಲಾಗಿದೆ.

ಈ ವ್ಯವಸ್ಥೆ ದೇಶದ ಮಟ್ಟದಲ್ಲಿ ಮೊದಲ ಪ್ರಯತ್ನವಾಗಿದ್ದು, ನೌಕಾಪಡೆಯ ಸಾಮರ್ಥ್ಯ ಹೆಚ್ಚಿಸುವ ದಿಟ್ಟ ಹೆಜ್ಜೆಯಾಗಿದೆ. ಈವರೆಗೆ ಕಲ್ವರಿ ವರ್ಗದ ಸಬ್‌ಮೆರಿನ್‌ಗಳ ಪರೀಕ್ಷೆ ಮತ್ತು ನಿರ್ವಹಣೆಗೆ ಫ್ರಾನ್ಸ್ ದೇಶವನ್ನು ಅವಲಂಬಿಸಬೇಕಾಗುತ್ತಿತ್ತು. ಇದರಿಂದ ಹೆಚ್ಚಿನ ಸಮಯ ಹಾಗೂ ವೆಚ್ಚವೂ ವ್ಯಯವಾಗುತ್ತಿತ್ತು. ಆದರೆ ಈಗ ಕಾರವಾರದ ಕದಂಬ ನೌಕಾನೆಲೆಯಲ್ಲಿ ಸಬ್‌ಮೆರಿನ್‌ಗಳ ನಿಲ್ದಾಣದ ಜೊತೆಗೆ ಅವುಗಳ ಪರೀಕ್ಷೆಗಾಗಿ ನವೀನ ನಿರ್ವಹಣಾ ಘಟಕವನ್ನು ಪ್ರಾರಂಭಿಸಲಾಗಿದೆ. ನ್ಯುಮ್ಯಾಟಿಕ್ ರ್ಯಾಮ್ ಟೆಸ್ಟ್ ಸೌಲಭ್ಯಕ್ಕೆ ಭಾರತೀಯ ನೌಕಾಪಡೆಯ ವೈಸ್ ಅಡ್ಮಿರಲ್ ಬಿ. ಶಿವಕುಮಾರ್ ಚಾಲನೆ ನೀಡಿದ್ದಾರೆ.

ಈ ನೂತನ ಸೌಲಭ್ಯದಲ್ಲಿ ನ್ಯುಮ್ಯಾಟಿಕ್ ರ್ಯಾಮ್ ಟೆಸ್ಟ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಕಲ್ವರಿ ವರ್ಗದ ಸಬ್‌ಮೆರಿನ್‌ಗಳಲ್ಲಿ ಬಳಸುವ ಪ್ರಮುಖ ನ್ಯುಮ್ಯಾಟಿಕ್ ವ್ಯವಸ್ಥೆಗಳ ಪರೀಕ್ಷೆ ಮತ್ತು ನಿರ್ವಹಣೆ ಸುಲಭವಾಗಲಿದೆ. ಈ ಮೂಲಕ ಭಾರತ ತನ್ನ ಸ್ವದೇಶಿ ತಾಂತ್ರಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದ್ದು, ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೆ ಇದು ಪ್ರಮುಖ ಮೈಲುಗಲ್ಲಾಗಿದೆ.

ಕಲ್ವರಿ ವರ್ಗದ ಸಬ್‌ಮರಿನ್‌ ವಿಶೇಷತೆ ಏನು?
ಕಲ್ವರಿ ವರ್ಗದ ಸಬ್‌ಮೆರಿನ್ ಎಂದರೆ ಭಾರತೀಯ ನೌಕಾಪಡೆಯ ಅತ್ಯಾಧುನಿಕ ಡೀಸೆಲ್-ಎಲೆಕ್ಟ್ರಿಕ್ ದಾಳಿಯ ಜಲಾಂತರ್ಗಾಮಿಗಳ ಒಂದು ವರ್ಗ. ಇವು ಫ್ರಾನ್ಸ್ ದೇಶದ Scorpene design ಆಧಾರಿತವಾಗಿದ್ದು, ಭಾರತದಲ್ಲೇ ನಿರ್ಮಿಸಲಾಗಿದೆ. ಈ ಯೋಜನೆಯನ್ನು Indian Navy ಹಾಗೂ Mazagon Dock Shipbuilders Limited ಸಹಯೋಗದಲ್ಲಿ ನಿರ್ಮಿಸಲಾಗಿದೆ.

ಶತ್ರು ರಡಾರ್ ಅಥವಾ ಸೋನಾರ್‌ಗೆ ಸುಲಭವಾಗಿ ಪತ್ತೆಯಾಗುವುದಿಲ್ಲ. ಅತ್ಯಾಧುನಿಕ ಸೋನಾರ್ ವ್ಯವಸ್ಥೆ ಸಮುದ್ರದೊಳಗಿನ ಹಡಗುಗಳು, ಸಬ್‌ಮೆರಿನ್‌ಗಳು ಹಾಗೂ ಗುರಿಗಳನ್ನು ದೂರದಿಂದ ಪತ್ತೆಹಚ್ಚಲು ಸೋನಾರ್ ಸಿಸ್ಟಮ್ ಇರುತ್ತದೆ. ವಿಶೇಷವಾಗಿ ನೀರಿನೊಳಗೆ ಹೆಚ್ಚು ದಿನ ಇರಬಹುದು. ಡೀಸೆಲ್-ಎಲೆಕ್ಟ್ರಿಕ್ ವ್ಯವಸ್ಥೆಯಿಂದ ಹಲವು ದಿನಗಳ ಕಾಲ ನೀರಿನೊಳಗೆ ಕಾರ್ಯನಿರ್ವಹಿಸುತ್ತದೆ.

ಭಾರತದಲ್ಲೇ ನಿರ್ಮಾಣ
Make in India ಯೋಜನೆಯಡಿ ಭಾರತದಲ್ಲೇ ನಿರ್ಮಾಣವಾದ ಅತ್ಯಾಧುನಿಕ ಜಲಾಂತರ್ಗಾಮಿ ಸಬ್‌ಮೆರಿನ್‌ಗಳಾಗಿವೆ. ಕಲ್ವರಿ ವರ್ಗದ ಸಬ್‌ಮೆರಿನ್‌ಗಳು ಒಟ್ಟು ಆರಕ್ಕೂ ಹೆಚ್ಚು ಭಾರತೀಯ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಮುಂಬೈ ಹಾಗೂ ವಿಶಾಕಪಟ್ಟಣಂ ಇವುಗಳ ನಿಲುಗಡೆ ಸ್ಥಳವಾಗಿದೆ. 

ಕಾರವಾರ ಕದಂಬ ನೌಕಾನೆಲೆ ಫೇಸ್ -2 ಪ್ರಾಜಕ್ಟ್ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ಸಬ್‌ಮೆರಿನ್‌ಗಳಿಗೆ ನಿಲ್ದಾಣ ಸಹ ಮಾಡಲಾಗುತ್ತಿದೆ. ಇದಲ್ಲದೇ ಈ ನೌಕಾನೆಲೆ ರಿಪೇರಿ ಯಾರ್ಡ್‌ ಸಹ ಆಗಿದ್ದು, ಕಲ್ವರಿ ವರ್ಗದ ಸಬ್‌ಮೆರಿನ್ ಘಟಕ ಪ್ರಾರಂಭ ಮಾಡಿರುವುದು ಮತ್ತಷ್ಟು ಶಕ್ತಿ ನೀಡುವ ಜೊತೆಗೆ ಉದ್ಯೋಗ ಸೃಷ್ಟಿಗೂ ಅವಕಾಶ ಕಲ್ಪಿಸಿದೆ.