SSLC ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಪ್ರಮುಖ ಸೂಚನೆ: ತಿಳಿದುಕೊಳ್ಳಲೇಬೇಕಾದ ಮಾಹಿತಿ

ನಾಳೆಯಿಂದ (ಮಾರ್ಚ್ 18) ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಲಿವೆ. ಈ ಬಾರಿ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವ ಉದ್ದೇಶದಿಂದ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಜೊತೆಗೆ ಸಿಸಿಟಿವಿ ಕಣ್ಗಾವಲನ್ನು ಕೂಡ ಹೆಚ್ಚಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೇ, ಆತ್ಮವಿಶ್ವಾಸದಿಂದ ಹಾಗೂ ಶಾಂತಚಿತ್ತದಿಂದ ಪರೀಕ್ಷೆ ಬರೆಯುವಂತೆ ಇಲಾಖೆ ಸೂಚಿಸಿದೆ.

ನಾಳೆಯಿಂದ ರಾಜ್ಯಾದ್ಯಂತ ಎಸ್​ಎಸ್​ಎಲ್​​ಸಿ ಪರೀಕ್ಷೆ ಆರಂಭವಾಗಲಿದ್ದು, ಒಟ್ಟು 2871 ಕೇಂದ್ರಗಳಲ್ಲಿ ಎಕ್ಸಾಂ ನಡೆಯಲಿದೆ. ಈ ವರ್ಷ 9,02,889 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಆ ಪೈಕಿ 8,12,855 ಹೊಸಬರು ಪರೀಕ್ಷೆ ಬರೆಯಲಿದ್ದಾರೆ. 62,845 ರಿಪೀಟರ್ಸ್​ ಮತ್ತು 27,189 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಆತಂಕದ ಹಿನ್ನೆಲೆ ತಡೆಗೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿ ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಮಾರ್ಗಸೂಚಿಯಲ್ಲಿ ಏನು ಇದೆ? ಇಲ್ಲಿದೆ ಪ್ರಮುಖ ಅಂಶಗಳು:

  • ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಸಂಪೂರ್ಣ ನಿಷೇಧ
  • ಸ್ಮಾರ್ಟ್ ವಾಚ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಕಟ್ಟುನಿಟ್ಟಾಗಿ ನಿಷೇಧ
  • ಪರೀಕ್ಷಾ ಕೇಂದ್ರಗಳಲ್ಲಿ ಅನಧಿಕೃತ ವ್ಯಕ್ತಿಗಳಿಂದ ಚಿತ್ರೀಕರಣಕ್ಕೆ ನಿರ್ಬಂಧ
  • ನಿಷೇಧಿತ ವಲಯದಲ್ಲಿ ಸ್ಫೋಟಕ ವಸ್ತುಗಳು ಹಾಗೂ ಯಾವುದೇ ಮಾರಕ ಆಯುಧಗಳನ್ನು ಹೊಂದುವುದಕ್ಕೆ ಅವಕಾಶ ಇಲ್ಲ
  • ಯಾವುದೇ ರೀತಿಯ ಮಾಹಿತಿ ರವಾನಿಸುವುದು ಕಡ್ಡಾಯವಾಗಿ ನಿಷೇಧ
  • ಪರೀಕ್ಷೆಯನ್ನು ವೆಬ್ ಕಾಸ್ಟಿಂಗ್ ಮೂಲಕ ನಿರಂತರವಾಗಿ ಮಾನಿಟರ್ ಮಾಡಲಾಗುತ್ತದೆ
  • ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯವಾಗಿದೆ

ವಿದ್ಯಾರ್ಥಿಗಳಿಗೆ ಸೂಚನೆ

ಈಗಾಗಲೇ ಬರೆದಿರುವ ಪೂರ್ವ ಸಿದ್ಧತಾ ಪರೀಕ್ಷೆಗಳು, ಮಂಡಳಿಯಿಂದ ನೀಡಲಾದ ನೀಲನಕ್ಷೆ (ಬ್ಲೂಪ್ರಿಂಟ್) ಮತ್ತು ಮಾದರಿ ಪ್ರಶ್ನೆಪತ್ರಿಕೆಗಳ ಮೇಲೆ ಹೆಚ್ಚು ಗಮನ ಹರಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಯಾವುದೇ ತಪ್ಪು ಮಾಹಿತಿ ಅಥವಾ ವದಂತಿಗಳಿಗೆ ಕಿವಿಗೊಡಬಾರದು. ಇದರಿಂದ ತಮ್ಮ ಅಧ್ಯಯನದ ಗಮನ ಕೆಡಿಸಿಕೊಳ್ಳಬಾರದು. ಪರೀಕ್ಷೆ ಬರೆಯುವಾಗ ಶಾಂತಚಿತ್ತದಿಂದ ಇರಬೇಕು, ಪ್ರತಿ ಪ್ರಶ್ನೆಯನ್ನು ಒಂದು ಬಾರಿ ಓದಿ, ಅರ್ಥವಾಗದಿದ್ದರೆ ಮತ್ತೊಮ್ಮೆ ಓದಿ ಸರಿಯಾಗಿ ಅರ್ಥಮಾಡಿಕೊಂಡು ಉತ್ತರ ಬರೆಯಬೇಕು. ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಆಧಾರದ ಮೇಲೆ ಸಿದ್ಧರಾಗಿರುವ ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳನ್ನು ಗಳಿಸುವ ಮತ್ತು ಸುಲಭವಾಗಿ ಪಾಸಾಗುವ ಹೆಚ್ಚಿನ ಅವಕಾಶಗಳಿವೆ ಎಂದು ಇಲಾಖೆ ತಿಳಿಸಿದೆ.