ಸಿಡ್ನಿ ಏಕದಿನ ಪಂದ್ಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಪನಾಯಕ ಶ್ರೇಯಸ್ ಅಯ್ಯರ್ ಅವರನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 2 ದಿನಗಳ ಕಾಲ ಐಸಿಯುನಲ್ಲೇ ಇರಿಸಲಾಗುವುದು ಎಂದು ಬಿಸಿಸಿಐ ಮಾಹಿತಿ ನೀಡಿದ್ದು, ಆ ಬಳಿಕ ಅಗತ್ಯ ಬಿದ್ದರೆ ಅಲ್ಲೇ ಚಿಕಿತ್ಸೆ ಮುಂದುವರಿಸುವುದಾಗಿಯೂ ತಿಳಿಸಿದೆ. ಸದ್ಯಕ್ಕೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದು ಬಿಸಿಸಿಐ ವೈದ್ಯರ ತಂಡವೇ ನಿಗಾ ಇರಿಸಿದೆ ಎಂದು ತಿಳಿದು ಬಂದಿದ್ದು ನಿರಾತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿರುವ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಅವರು ನಮಗೆ ಫೋನ್‌ನಲ್ಲಿ ಉತ್ತರಿಸುತ್ತಿದ್ದಾರೆ ಅಂದರೆ ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದರ್ಥ.
ಈ ಘಟನೆ ದುರದೃಷ್ಟಕರ, ಇದೀಗ ವೈದ್ಯರು ಅವರ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತಿದ್ದಾರೆ. ಮುಂದಿನ ಕೆಲವು ದಿನಗಳವರೆಗೆ ಅವರನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಹೀಗಾಗಿ ಈ ಬಗ್ಗೆ ಆತಂಕಪಡಬೇಕಾಗಿಲ್ಲ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
ಶ್ರೇಯಸ್ ಅಯ್ಯರ್ಗೆ ಗಾಯಗೊಂಡಿದ್ದು ಹೇಗೆ?
ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಹರ್ಷಿತ್ ರಾಣಾ ಅವರ ಎಸೆತದಲ್ಲಿ ಅಲೆಕ್ಸ್ ಕ್ಯಾರಿ ಭರ್ಜರಿ ಹೊಡೆತ ಬಾರಿಸಿದ್ದರು. ಈ ವೇಳೆ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ನಿಂತಿದ್ದ ಅಯ್ಯರ್ ವೇಗವಾಗಿ ಓಡಿ ಹೋಗಿ ಡೈವಿಂಗ್ ಕ್ಯಾಚ್ ಹಿಡಿದಿದ್ದರು.

ಈ ಡೈವಿಂಗ್ ವೇಳೆ ಅವರ ಎಡ ಪಕ್ಕೆಲುಬುಗಳಿಗೆ ಗಂಭೀರ ಪೆಟ್ಟು ಬಿದ್ದಿದೆ. ಈ ಹೊಡೆತದ ನೋವಿನಿಂದ ನರಳಿದ್ದ ಶ್ರೇಯಸ್ ಅಯ್ಯರ್ ಅವರನ್ನು ತಕ್ಷಣವೇ ವೈದ್ಯರಲ್ಲಿಗೆ ಕರೆದೊಯ್ಯಲಾಗಿತ್ತು. ಇದೀಗ ಸಿಡ್ನಿಯಲ್ಲಿ ಶ್ರೇಯಸ್ ಅಯ್ಯರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯವು ಸ್ಥಿರವಾಗಿದೆ ಎಂದು ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
