ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರ ಹಾರೈಕೆ – ಸೆಟ್ಟೇರಿತು ‘ರಕ್ಕಿ’ ಸಿನಿಮಾ

ಹೊಸ ಪ್ರತಿಭಾವಂತ ನಟ ರಕ್ಕಿ ನಾಯಕನಾಗಿ ಅಭಿನಯಿಸುತ್ತಿರುವ ‘ರಕ್ಕಿ’ ಚಿತ್ರದ ಮುಹೂರ್ತ ಕಾರ್ಯಕ್ರಮ ಭರ್ಜರಿಯಾಗಿ ನೆರವೇರಿತು. ಈ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾಗವಹಿಸಿ ತಂಡಕ್ಕೆ ಶುಭಾಶಯ ಕೋರಿ ಹಾರೈಸಿದರು. ಚಿತ್ರದಲ್ಲಿ ರಕ್ಕಿ ಜೊತೆಗೆ ಆಶಿಕಾ ಸೋಮಶೇಖರ್ ಹಾಗೂ ಪಲ್ಲವಿ ಮಂಜುನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಸುರೇಶ್ ಅವರ ಮಗ ರಕ್ಕಿ ಅವರೇ ಈ ಚಿತ್ರದ ನಾಯಕ. ಅವರ ಹೆಸರನ್ನೇ ಸಿನಿಮಾಗೆ ಶೀರ್ಷಿಕೆಯಾಗಿ ಇಡಲಾಗಿದೆ. ಅಶ್ವಿನಿ ಪುನೀತ್ ರಾಜ್​​​ಕುಮಾರ್ ಅವರ ಆಶೀರ್ವಾದದೊಂದಿಗೆ ಈ ಸಿನಿಮಾ ಸೆಟ್ಟೇರಿದೆ. ‘ಎಸ್.ಎನ್.ಆರ್. ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ವೆಂಕಟ್ ಭಾರದ್ವಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ‘ರಕ್ಕಿ’ ಸಿನಿಮಾದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿಸಿ ಸಿನಿಮಾ ಯಶಸ್ವಿ ಆಗಲೆಂದು ಅವರು ಹಾರೈಸಿದರು. ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಕಥೆ ಕೇಳಿ ಚೆನ್ನಾಗಿದೆ ಎಂದ ಬಳಿಕವೇ ಸುರೇಶ್ ಅವರು ಈ ಸಿನಿಮಾ ಮಾಡಲು ಮುಂದಾಗಿದ್ದು.

‘ನಾನು ಐಟಿ ಉದ್ಯೋಗಿ. 20 ವರ್ಷಗಳಿಂದ ಜರ್ಮನಿಯಲ್ಲಿ ವಾಸಿಸುತ್ತಿದ್ದೇನೆ. ನಮ್ಮ ತಂದೆ ರಾಜಶೇಖರ್ ಅವರು ಡಾ. ರಾಜ್​ಕುಮಾರ್ ನಟನೆ ಹೊಸಬೆಳಕು ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈಗ ನಾನು ರಕ್ಕಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದೇನೆ. ನಮ್ಮ ಕುಟುಂಬದ ಸ್ನೇಹಿತರಾದ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಒಪ್ಪಿದ ಕಥೆಯನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದೇವೆ’ ಎಂದು ನಿರ್ಮಾಪಕ ಸುರೇಶ್ ಅವರು ಹೇಳಿದರು.

ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಈ ಸಿನಿಮಾದ ಕಥೆಯಲ್ಲಿವೆ. ಬೆಂಗಳೂರಿನಲ್ಲಿ ನಿರ್ಮಿಸಿರುವ ಅದ್ದೂರಿ ಸೆಟ್​​ನಲ್ಲಿ ಹೆಚ್ಚಿನ ದೃಶ್ಯಗಳ ಶೂಟಿಂಗ್ ನಡೆಯಲಿದೆ. ಆಶಿಕಾ ಸೋಮಶೇಖರ್, ಪಲ್ಲವಿ ಮಂಜುನಾಥ್ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಬಿ. ಸುರೇಶ, ಹರಿಣಿ ಶ್ರೀಕಾಂತ್, ರಮೇಶ್ ಪಂಡಿತ್, ಸುಂದರರಾಜ್, ಸಂಪತ್ ಮೈತ್ರೇಯ, ಗಂಟೆ ಗೋವಿಂದ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ’ ಎಂದು ನಿರ್ದೇಶಕ ವೆಂಕಟ್ ಭಾರದ್ವಾಜ್ ಮಾಹಿತಿ ನೀಡಿದರು.