ಬಿಜೆಪಿ ತೊರೆದ ಸಂಸದ ಬಿ.ಎನ್ ಬಚ್ಚೇಗೌಡ, ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಲಿ ಸಂಸದ ಬಿ.ಎನ್.ಬಚ್ಚೇಗೌಡ ರಾಜೀನಾಮೆ ಸಲ್ಲಿಸಿದ್ದಾರೆ. ಈ ಹಿಂದೆಯೇ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದ ಬಿ. ಎನ್. ಬಚ್ಚೆಗೌಡ, ಪಕ್ಷದ ಸಂಘಟನೆ ಹಾಗೂ ಚಟುವಟಿಕೆಗಳಿಂದ ಸಂಪೂರ್ಣ ದೂರ ಉಳಿದಿದ್ದರು. ಸದ್ಯ ಈಗ ರಾಜೀನಾಮೆ ಕೋಡಿ ಪತ್ರ ರವಾನಿಸಿದ್ದಾರೆ.

ಬೆಂಗಳೂರು, ಮಾರ್ಚ್​.21: ಸಂಸದ ಬಿ.ಎನ್. ಬಚ್ಚೇಗೌಡ (BN Bachegowda) ಅವರು ಬಿಜೆಪಿ ತೊರೆದಿದ್ದಾರೆ. ಬಿಜೆಪಿ (BJP) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮೂರು ದಿನಗಳ ಹಿಂದೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರಿಗೆ (BY Vijayendra) ರಾಜೀನಾಮೆ ಪತ್ರ ರವಾನಿಸಿರುವ ಮಾಹಿತಿ ಸಿಕ್ಕಿದೆ. ಸ್ವ ಇಚ್ಚೆಯಿಂದ ರಾಜೀನಾಮೆ ಸಲ್ಲಿಸುತ್ತಿರೋದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಸ್ವ ಇಚ್ಛೆಯಿಂದ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ರಾಜೀನಾಮೆ ಅಂಗೀಕರಿಸಬೇಕು ಎಂದು ಕೋರುತ್ತೇನೆ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. 2008ರಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದು ಶಾಸಕ, ಸಚಿವ, ಸಂಸದನಾಗಿ ಸಾರ್ವಜನಿಕ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ಮತ್ತು ಪಕ್ಷದ ಹಿರಿಯ ಮುಖಂಡರಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದ್ದಾರೆ.

ಸಂಸದ ಬಿ.ಎನ್ ಬಚ್ಚೇಗೌಡ ರಾಜೀನಾಮೆ ಪತ್ರ

ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಈ ಹಿಂದೆಯೇ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದರು. ಪಕ್ಷದ ಸಂಘಟನೆ ಹಾಗೂ ಚಟುವಟಿಕೆಗಳಿಂದ ಸಂಪೂರ್ಣ ದೂರ ಉಳಿದಿದ್ದರು.ಕಳೆದ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ಅವರನ್ನು ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು.

ಬಿ.ಎನ್.ಬಚ್ಚೇಗೌಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೆಂಡಗಾನಹಳ್ಳಿ ಗ್ರಾಮದವರು. 82 ವರ್ಷದ ಬಿ.ಎನ್.ಬಚ್ಚೇಗೌಡ ಪ್ರಸ್ತುತ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿಯ ಸಂಸದರಾಗಿದ್ದಾರೆ. ಇವರು 1978 ರಲ್ಲಿ ಜನತಾ ಪಕ್ಷದ ಮೂಲಕ ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾದರು. ಬಳಿಕ 1985, 1994, 1999 ಹಾಗೂ 2008 ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಶಾಸಕರಾಗಿ ಒಟ್ಟು 5 ಬಾರಿ ಆಯ್ಕೆಯಾದರು. 1989, 2004, 2013 ರಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರ ಸೋಲನ್ನು ಅನುಭವಿಸಿದ್ದರು. ನಂತರ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು.