ಹೊನ್ನಾವರ: ಒಂದು ದೇಶ ಅಭಿವೃದ್ದಿಯಾಗಿದೆ ಎಂದು ಗುರುತಿಸಿಕೊಳ್ಳುವುದು ಶಿಕ್ಷಣದಿಂದ ಮಾತ್ರ. ಯಾವ ದೇಶದಲ್ಲಿ ನೂರಕ್ಕೆ ನೂರರಷ್ಟು ಶಿಕ್ಷಣ ಇದೆಯೋ ಅದು ಅಭಿವೃದ್ದಿ ಹೊಂದಿದ ದೇಶವಾಗುವುದು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ತಾಲೂಕಿನ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಮಂಗಳವಾರ ‘ಪೋಷಣ ಶಕ್ತಿ ನಿರ್ಮಾಣ’ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಶಿಕ್ಷಣ ಆರೊಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ.ರಾಜ್ಯದ ಎಲ್ಲ ಶಾಲಾ ಮಕ್ಕಳಿಗೆ ಸಮವಸ್ತ್ರ ಕೊಡುವ ಯೋಜನೆ ರಾಮಕೃಷ್ಣ ಹೆಗಡೆ,ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಇದ್ದಾಗ ಬಿಸಿಯೂಟದ ಯೋಜನೆ ಜಾರಿಗೆ ತಂದರು. ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಸೈಕಲ್ ವಿತರಿಸುವ ಯೋಜನೆ ತಂದರು. ಹೀಗೆ ಈ ಎಲ್ಲ ಮುಖ್ಯಮಂತ್ರಿಗಳು ಶಿಕ್ಷಣಕ್ಕೆ ಆದ್ಯತೆ ನೀಡಿ ಪಾಲಕರ ಮೇಲಿನ ಹೊರೆ ಕಡಿಮೆ ಮಾಡಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಪೋಷಣ ಶಕ್ತಿ ನಿರ್ಮಾಣ ಯೋಜನೆ ತಂದು ಮಕ್ಕಳಿಗೆ ಪೌಷ್ಠಿಕಾಂಶ ಹೆಚ್ಚಿಸುವ ಯೋಜನೆ ತಂದಿದ್ದಾರೆ. ವಾಜಪೇಯಿಯವರು ಪ್ರಧಾನಿ ಇದ್ದಾಗ ಶಾಲೆಗಳಿಗೆ ಮಣ್ಣಿನ ಗೋಡೆ ತೆಗೆದು ಕಲ್ಲಿನ ಗೋಡೆ ನಿರ್ಮಿಸುವ ಸರ್ವ ಶಿಕ್ಷಣ ಅಭಿಯಾನ ಜಾರಿಗೆ ತಂದಿದ್ದಾರೆ ಎಂದರು. ಚೆನ್ನಕೇಶವ ಪ್ರೌಢಶಾಲೆಗೆ ರಂಗ ಮಂದಿರ ನಿರ್ಮಾಣಕ್ಕೆರೂ. 5 ಲಕ್ಷ ಅನುದಾನ ಮಂಜೂರಾತಿ ಕೊಡುವುದಾಗಿ ಹೇಳಿದರು.
ಪ್ರೌಢಶಾಲೆಯ ಆಡಳಿತ ಮಂಡಳಿಯ ನಿರ್ದೇಶಕ ಸುಬ್ರಾಯ ಭಟ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ
ಆಡಳಿತ ಮಂಡಳಿಯ ಅಧ್ಯಕ್ಷ ಗಜಾನನ ಹೆಗಡೆ, ಬಿ.ಆರ್.ಸಿ. ಎಸ್.ಎಂ.ಹೆಗಡೆ, ಗ್ರಾ.ಪಂ. ಸದಸ್ಯರಾದ ಶ್ರೀಕಾಂತ ಮೊಗೇರ, ಸಾಧನಾ ನಾಯ್ಕ, ನಾಗರಾಜ ಗೌಡ ಗಜಾನನ ನಾಯ್ಕ, ಹರೀಶ ನಾಯ್ಕ ಉಪಸ್ಥಿತರಿದ್ದರು.