ಎಸ್.ಡಿ.ಎಂ.ಕಾಲೇಜಿನಲ್ಲಿ ನಡೆದ ಮತದಾನ ಗುರುತಿನ ಚೀಟಿಗೆ ಆಧಾರ ಕಾರ್ಡ್ ಜೋಡಣೆಯ ತರಬೇತಿ ಶಿಬಿರ

ಹೊನ್ನಾವರ: ಪ್ರಜಾಪ್ರಭುತ್ವದಲ್ಲಿ ಮತದಾನ ಎನ್ನುವುದು ಮೌಲ್ಯಯುತವಾಗಿದೆ. ಪ್ರತಿಯೊಬ್ಬರೂ ಮತದಾನದ ಒಂದು ಭಾಗವಾಗಬೇಕು ಎಂದು ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ಹೇಳಿದರು.

ಪಟ್ಟಣದ ಎಸ್.ಡಿ.ಎಂ.ಕಾಲೇಜಿನಲ್ಲಿ ಶುಕ್ರವಾರ ನಡೆದ ಮತದಾನ ಗುರುತಿನ ಚೀಟಿಗೆ ಆಧಾರ ಕಾರ್ಡ್ ಜೋಡಣೆಯ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಚುನಾವಣಾ ಗುರುತಿನ ಚೀಟಿ ಆಧಾರ ಕಾರ್ಡ ಜೋಡಣೆಯು ಯಶ್ವಸಿಯಾಗಲು ಮತಗಟ್ಟೆಯ ಅಧಿಕಾರಿಗಳ ಪಾತ್ರ ಮಹತ್ವವಾಗಿದೆ ಎಂದರು.

ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ವಿಶೇಷ ಉಪನ್ಯಾಸಕರಾಗಿ ಎಲ್.ಜಿ.ಭಟ್ ಮಾತನಾಡಿ, ಇದರ ಮುಖ್ಯ ಉದ್ದೇಶ ಮತದಾರ ಪಟ್ಟಿಯಲ್ಲಿರುವವರನ್ನು ಗುರುತಿಸುವ ಪ್ರಕ್ರಿಯೆಯಾಗಿದೆ. ಮತದಾರನ ವಿವರ ಸ್ವಯಂ ದೃಢೀಕರಣ ಮಾಡುವುದಾಗಿದೆ. ಅನೇಕ ಜನರಲ್ಲಿ ದಾಖಲೆಗಳು ದುರ್ಬಳಕೆ ಅಥವಾ ಬಹಿರಂಗವಾಗಬಹುದು ಎಂಬ ತಪ್ಪು ಕಲ್ಪನೆ ಇದೆ. ಇಲ್ಲಿ ಸ್ವಯಂ ದೃಢೀಕರಣ ಜೊತೆಗೆ ಕಾನೂನಾತ್ಮಕವಾಗಿ ಪ್ರಕ್ರಿಯೆ ನಡೆಯುತ್ತದೆ ಎಂದರು.

ಈ ವೇಳೆ ತಾಲೂಕಾಡಳಿತದ ಅಧಿಕಾರಿ ಕೇಶವ್ ನಾಯ್ಕ ಪಿಪಿಟಿ‌ ಮೂಲಕ ಆಧಾರ್ ಜೋಡಣೆ ಪ್ರಕ್ರಿಯೆ ಪ್ರಸ್ತುತಪಡಿಸಿದರು.

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗರಾಜ ನಾಯ್ಕಡ್, ತಾ,ಪಂ ಇಒ ಸುರೇಶ್ ನಾಯ್ಕ, ಉಷಾ ಹಾಸ್ಯಗಾರ, ಉಪನ್ಯಾಸಕ ವಿಶಾಲ್, ತಾಲೂಕಾ ಮಟ್ಟದ ಅಧಿಕಾರಿಗಳು, ತಾಲೂಕಿನ ಎಲ್ಲಾ ಮತದಾರರ ಸಾಕ್ಷರತಾ ಸಂಘ, ಬಿ.ಎಲ್.ಓ. ಮೇಲ್ವಿಚಾರಕರು ಸಭೆಯಲ್ಲಿ ಹಾಜರಿದ್ದರು.