ಪ.ಪಂ ಅಧ್ಯಕ್ಷ ಶಿವರಾಜ ಮೇಸ್ತ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ

ಹೊನ್ನಾವರ: ಪ.ಪಂ ಅಧ್ಯಕ್ಷ ಶಿವರಾಜ ಮೇಸ್ತ ಅಧ್ಯಕ್ಷತೆಯಲ್ಲಿ ನಡೆದ ಸಾಮನ್ಯ ಸಭೆಯಲ್ಲಿ ಪಟ್ಟಣದ ರಸ್ತೆಯ ಹೊಂಡಕ್ಕೆ ತೇಪೆ ಹಚ್ಚುವ ಕಾರ್ಯ ಹಾಗೂ ಬೀದಿ ದೀಪದ ವಿಷಯ ಚರ್ಚೆಯಾಗಿ ಗದ್ದಲ ಏರ್ಪಟ್ಟಿತ್ತು.

ಬೀದಿದೀಪ ಗುತ್ತಿಗೆ ಪಡೆದ ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಸದಸ್ಯರಿಗೆ ಉಲ್ಟಾ ಪಲ್ಟಾ ಮಾತನಾಡಿ ಅವಾಜ್ ಹಾಕುತ್ತಾರೆ ಎಂದು ಸದಸ್ಯ ಸುಭಾಷ ಹರಿಜನ ಹೇಳುತ್ತಿದ್ದಂತೆ ಮೇದಾ ನಾಯ್ಕ, ಸುರೇಶ ಹೊನ್ನಾವರ ಧ್ವನಿಗೂಡಿಸಿದರು. ಗುತ್ತಿಗೆ ಪಡೆದ ಗುತ್ತಿಗೆದಾರರನ್ನು ಸಭೆಗೆ ಕರೆಸುವಂತೆ ಸದಸ್ಯರು ಪಟ್ಟು ಹಿಡಿದರು. ಅದಲ್ಲದೇ 15 ದಿನದೊಳಗೆ ಬೀದಿ ದೀಪ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಅಲ್ಲದೆ ಶಾಸಕ ದಿನಕರ ಶೆಟ್ಟಿ ಬಳಿ ಬೀದಿ ದೀಪ ಸಮಸ್ಯೆ ಮನದಟ್ಟು ಮಾಡಿ 2500 ಬೀದಿ ದೀಪ ಬೇಡಿಕೆ ಇಡಲು ಸದಸ್ಯರು ತಿರ್ಮಾನ ಕೈಗೊಂಡರು.

ಪೌರ ಕಾರ್ಮಿಕರು ಕಸ ಸಂಗ್ರಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂದಾಗ ಅಧಿಕಾರಿಗಳು ಎರಡು ದಿನದೊಳಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಭೆಯಲ್ಲಿ ಪ.ಪಂ ಉಪಾಧ್ಯಕ್ಷೆ ನಿಶಾ ಶೇಟ್, ಸ್ಥಾಯಿಸಮಿತಿ ಅಧ್ಯಕ್ಷ ನಾಗರಾಜ ಭಟ್, ಮುಖ್ಯಾಧಿಕಾರಿ ಪ್ರವೀಣ ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.