ಪ್ರವೀಣ್ ಹತ್ಯೆಗೆ ಖಂಡನೆ: ಬಿಜೆಪಿ ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ

ಕಾರವಾರ: ಬಿಜೆಪಿ ಕಾರ್ಯಕರ್ತ ಪ್ರವೀಣ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಧಿಸಿ ಸರಕಾರದ ವೈಫಲ್ಯವನ್ನು ವಿರೋಧಿಸಿ ಕಾರವಾರ ನಗರ ಮತ್ತು ಗ್ರಾಮೀಣ ಯುವ ಮೋರ್ಚಾದ 42 ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿ ಬಿಜೆಪಿ ಸರಕಾರದ ವಿರುದ್ಧ ಗುರುವಾರ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಜಮಾಯಿಸಿದ ಗ್ರಾಮೀಣ ಹಾಗೂ ನಗರ ಘಟಕದ ಪದಾಧಿಕಾರಿಗಳು ಸರಕಾರದ ವೈಫಲ್ಯದ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಪಕ್ಷ ಸಂಘಟನೆಗೆ ಯುವಕರನ್ನು ಬಳಸಿಕೊಂಡು ರಾಜಕಾರಣ ಮಾಡುತ್ತಿದೆ. ಯುವ ಕಾರ್ಯಕರ್ತರ ಹತ್ಯೆ ಆದಾಗ ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ ಕಠಿಣ ಕ್ರಮವನ್ನ ಕೈಗೊಳ್ಳುತ್ತಿಲ್ಲ. ಪರೇಶ ಮೆಸ್ತಾ, ಶಿವು ಉಪ್ಪಾರ, ಹರ್ಷ, ಇದೀಗ ಪ್ರವೀಣ ನಾಳೆ ನಾನೂ ಆಗಿಬಿಟ್ಟರೆ? ಹೀಗೆ ಇನ್ನೆಷ್ಟು ಕೊಲೆಗಳಾಗಬೇಕು? ಮುಂದೆ ಕಾರವಾರದಲ್ಲಿ ಕೊಲೆಯಾಗುವವರೆಗೆ ಕಾಯುತ್ತಿರುತ್ತೀರಾ? ಎಂದು ಸರಕಾರವನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿ ನಾವು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ ಎಂದು ಯುವಮೋರ್ಚಾ ಅಧ್ಯಕ್ಷ ಶುಭಂ ಕಳಸ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವ ಕ್ರಮ ಕೈಗೊಳ್ಳಬೇಕು. ಯುವಕರ ಈ ರೀತಿಯ ಸಾವು ನಮಗೆ ತೀವ್ರ ನೋವನ್ನುಂಟು ಮಾಡುತ್ತಿದ್ದು, ನಮ್ಮ ಸರಕಾರದ ವಿರುದ್ಧ ನಾವೇ ಘೋಷಣೆ ಕೂಗುತ್ತಿದ್ದೇವೆ. ನಮ್ಮ ರಕ್ಷಣೆಗೆಂದು ಬಿಜೆಪಿ ಸರಕಾರವನ್ನು ಅಸ್ತಿತ್ವಕ್ಕೆ ತಂದಿದ್ದು ಇಲ್ಲಿ ನಮ್ಮ ಯುವಕರೇ ಸಾಯುತ್ತಿದ್ದಾರೆ. ಮುಂದಿನ ದಿನ ನಮಗೂ ಇದೇ ಗತಿ ಬರಲಿದೆ ಎಂದರು.

ಮುಂದಿನ ಬಾರಿ ಬಿಜೆಪಿಗೆ ನಾವು ಬೆಂಬಲ ನೀಡಬೇಕು ಎಂದಾದರೆ ಸಿಎಂ ಯಾರಾಗಲಿದ್ದಾರೆ ಎಂಬುದನ್ನು ನಮಗೆ ಮೊದಲೇ ತಿಳಿಸಬೇಕು. ಈ ರೀತಿಯ ಸಿಎಂ ಆಳ್ವಿಕೆ ನಮಗೆ ಬೇಡ. ಚುನಾವಣೆ ಮುಂಚಿತವೇ ಮುಖ್ಯಮಂತ್ರಿಗಳ ಹೆಸರನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳನ್ನು ಬಂಧಿಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಈ ಘಟನೆ ಒಂದು ವೇಳೆ ರಾಜಕೀಯ ಪ್ರೇರಿತವಾಗಿದ್ದರೆ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ಒಂದು ವೇಳೆ ಧರ್ಮದ ಆಧಾರದಲ್ಲಿ ನಡೆದಿರುವುದಾದರೆ ಕಾರವಾರ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ