ಬೆಂಗಳೂರು: ಬಿಜೆಪಿ ಕಾರ್ಯಕರ್ತನಾಗಿದ್ದ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆಯ ಹಿನ್ನೆಲೆ ಬಿಜೆಪಿಯ ಜನೋತ್ಸವ ಕಾರ್ಯಕ್ರಮ ಹಾಗೂ ಇನ್ನಿತರೆ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು ಮಾಡಿಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬುಧವಾರ ಮಧ್ಯರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರೆ.
ನನ್ನ ಸರ್ಕಾರಕ್ಕೆ 1 ವರ್ಷ ಮತ್ತು ಯಡಿಯೂರಪ್ಪ ಸರ್ಕಾರಕ್ಕೆ 3 ವರ್ಷ ತುಂಬುತ್ತಿದ್ದು ಜನಪರವಾಗಿ ಮಾಡಿರುವ ಕೆಲಸಕ್ಕೆ ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಆದರೆ ಪ್ರವೀಣ್ ನೆಟ್ಟಾರು ಕುಟುಂಬಸ್ಥರ ಆಕ್ರಂದನ ನೋಡಿ ತುಂಬಾ ನೋವಾಗಿದೆ. ಆ ಕಾರಣಕ್ಕಾಗಿ ದೊಡ್ಡಬಳ್ಳಾಪುರ ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಅದಲ್ಲದೇ ಇಂದಿನ ವಿಧಾನಸೌಧದ ಸರ್ಕಾರಿ ಕಾರ್ಯಕ್ರಮಗಳನ್ನು ಕೂಡ ರದ್ದು ಮಾಡಿದ್ದೇನೆ. ಸರ್ಕಾರಿ ಕಾರ್ಯಕ್ರಮಗಳು ಯಾವುದು ಇರುವುದಿಲ್ಲ. ಮನಸ್ಸಾಕ್ಷಿಗೆ ಅನುಗುಣವಾಗಿ ಕಾರ್ಯಕ್ರಮ ರದ್ದು ಮಾಡಿದ್ದೇನೆ ಎಂದು ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.