ಜೀವನದಲ್ಲಿ ತಾಳ್ಮೆಯ ಪಾಠ ಕಲಿಯೋಣ: ರಾಘವೇಶ್ವರ ಶ್ರೀ

ಗೋಕರ್ಣ: ಕಾಲ ಪ್ರತೀಕ್ಷೆ ಎಲ್ಲ ಸಮಸ್ಯೆಗಳಿಗೆ ಪರಿಹಾರ, ತಾಳ್ಮೆಯ ಪಾಠವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಕಲಿಯೋಣ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು. ಇಲ್ಲಿನ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ರಾಮ ತಾಳ್ಮೆಯ ಸಾಕಾರ ಮೂರ್ತಿ ಶ್ರೀರಾಮನಿಂದ ತಾಳ್ಮೆಯೆಂಬ ಮಹಾಗುಣವನ್ನು ಆಶೀರ್ವಾದವಾಗಿ ಪಡೆಯೋಣ. ತಾಳ್ಮೆಯ ಸಂಪತ್ತಿನಿಂದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ತಾಳ್ಮೆಯೊಂದಿದ್ದರೆ ಶ್ರೇಯಸ್ಸು ನಮ್ಮನ್ನು ಅರಸಿಕೊಂಡು ಬರುತ್ತದೆ ಎನ್ನುವುದಕ್ಕೆ ಲಂಕೆಯ ಅಶೋಕಾವನದಲ್ಲಿ ಒಂದು ವರ್ಷ ರಾಮನ ಪ್ರತೀಕ್ಷೆಯಲ್ಲಿ ಕಳೆದ ಸೀತೆಯೇ ಉತ್ತಮ ಉದಾಹರಣೆ ಎಂದು ಬಣ್ಣಿಸಿದರು.

ಹಲವಾರು ಸಮಸ್ಯೆಗಳಿಗೆ ಏನೂ ಮಾಡದಿರುವುದೇ ಪರಿಹಾರ. ಬಹಳಷ್ಟು ಸಮಸ್ಯೆಗಳನ್ನು ತಾಳ್ಮೆ ಬಗೆಹರಿಸುತ್ತದೆ ಅಥವಾ ಸಮಸ್ಯೆಗಳ ಪರಿಹಾರಕ್ಕೆ ನೆರವಾಗುತ್ತದೆ. ಕೆಲವೊಮ್ಮೆ ಏನೂ ಕ್ರಮ ಕೈಗೊಳ್ಳದೇ ಕಾಯುವುದೇ ಸಮಸ್ಯೆ ಪರಿಹಾರದ ಕ್ರಮವಾಗಿರುತ್ತದೆ ಎಂದು ಉದಾಹರಣೆ ಸಹಿತ ವಿವರಿಸಿದರು.

ಚಾತುರ್ಮಾಸ್ಯ ಅಂಗವಾಗಿ ಬುಧವಾರ ರುದ್ರಹವನ, ರಾಮತಾರಕ ಹವನ, ಚಂಡಿ ಪಾರಾಯಣ, ಐಕ್ಯಮತ್ಯ ಹವನ, ಭಾಗ್ಯಸೂಕ್ತ ಹವನ ನಡೆಯಿತು. ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.