ಯುದ್ಧದ ಪರಿಣಾಮ : ಬನಶಂಕರಿ ಅಮ್ಮನವರ ಪ್ರಸಾದಕ್ಕೂ ತಟ್ಟಿದ ಬಿಸಿ

ಬೆಂಗಳೂರು:

ಇರಾನ್‌ ಯುದ್ಧದ ಪರಿಣಾಮ ಇದೀಗ ದೇವಸ್ಥಾನಗಳಿಗೂ ತಟ್ಟಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಪ್ರಸಾದ ತಯಾರಿಸಲು ಗ್ಯಾಸ್‌ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಯುದ್ಧದ ಹಿನ್ನಲೆಯಲ್ಲಿ ವಾಣಿಜ್ಯ ಎಲ್‌ಪಿಜಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ, ದೇವಸ್ಥಾನದಲ್ಲಿ ಪ್ರಸಾದ ತಯಾರಿಕೆಗೆ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.

ಪ್ರತಿದಿನ 3 ಸಾವಿರದಿಂದ 4 ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಿದರೆ ಶುಕ್ರವಾರ ಹಾಗೂ ಮಂಗಳವಾರ 4 ರಿಂದ 5 ಸಾವಿರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಬೆಳಗ್ಗೆ ಭಕ್ತಾದಿಗಳಿಗೆ ಪೊಂಗಲ್, ಪುಳಿಯೊಗರೆ, ರೈಸ್ ಬಾತ್‌ಗಳನ್ನು ಪ್ರಸಾದವಾಗಿ ನೀಡಿದರೆ ಮಧ್ಯಾಹ್ನ ಅನ್ನ ಸಾಂಬರ್ ನೀಡಲಾಗುತ್ತದೆ. ಸಂಜೆ ಸಹ ಪ್ರಸಾದದ ವ್ಯವಸ್ಥೆ ಇದೆ.

ಪ್ರತಿದಿನ ಭಕ್ತಾದಿಗಳಿಗೆ ಪ್ರಸಾದ ಸಿದ್ಧತೆ ಮಾಡೋದಕ್ಕೆ ಒಂದರಿಂದ ಎರಡು ಕಮರ್ಷಿಯಲ್ ಗ್ಯಾಸ್ ಬೇಕಾಗುತ್ತದೆ. ನಮ್ಮ ಬಳಿ ಸದ್ಯ 4 ಗ್ಯಾಸ್ ಬಾಕಿ ಇದ್ದು, ಇಂದು ಹಾಗೂ ನಾಳೆ ಸಂಜೆಯರೆಗೂ ನಿರ್ವಹಣೆ ಮಾಡಬಹುದು. ಸಿಲಿಂಡರ್‌ ಸಿಗದೇ ಇದ್ದರೆ ಶುಕ್ರವಾರದಿಂದ ಭಕ್ತಾಧಿಗಳಿಗೆ ಪ್ರಸಾದ ನೀಡುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ದೇವಸ್ಥಾನ ತಿಳಿಸಿದೆ.