ಭಾರತದ ವೇಗದ ಬೌಲರ್ ಬುಮ್ರಾ 18 ತಿಂಗಳು ತಂಡದಿಂದ ಔಟ್?

ಟೀಮ್ ಇಂಡಿಯಾ ಸತತ ಎರಡು ಬಾರಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಜಸ್​ಪ್ರೀತ್ ಬುಮ್ರಾ  ಪ್ರಮುಖ ಪಾತ್ರವಹಿಸಿದ್ದರು. ಇದೀಗ ಬುಮ್ರಾ ಅವರ ಮುಂದಿನ ಗುರಿ ಏಕದಿನ ವಿಶ್ವಕಪ್ ಹಾಗೂ ಟೆಸ್ಟ್ ವಿಶ್ವ ಚಾಂಪಿಯನ್​ಶಿಪ್ ಫೈನಲ್ ಆಗಿದೆ. ಈ ಪ್ರಮುಖ ಟೂರ್ನಿಗಳತ್ತ ಗಮನ ಹರಿಸುವ ಉದ್ದೇಶದಿಂದ ಅವರು ಟಿ20 ಕ್ರಿಕೆಟ್‌ನಿಂದ ದೀರ್ಘಾವಧಿಯ ವಿರಾಮ ತೆಗೆದುಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ.

ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಟಿ20 ಕ್ರಿಕೆಟ್​ನಿಂದ 18 ತಿಂಗಳುಗಳ ಕಾಲ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಮುಂಬರುವ ಏಕದಿನ ವಿಶ್ವಕಪ್​ಗಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದು ಈ ಮೂಲಕ ತಮ್ಮ ಕೆಲಸದ ಹೊರೆಯನ್ನು ಸರಿದೂಗಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಭಾರತ ತಂಡದ ದ್ವಿಪಕ್ಷೀಯ ಟಿ20 ಸರಣಿಗಳಿಂದ ಹೊರಗುಳಿಯಲಿದ್ದಾರೆ.

ಜಸ್​ಪ್ರೀತ್ ಬುಮ್ರಾ 2024ರ ಟಿ20 ವಿಶ್ವಕಪ್​ ಬಳಿಕ ಸತತ ಟಿ20 ಪಂದ್ಯಗಳನ್ನಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ 2026ರ ಟಿ20 ವಿಶ್ವಕಪ್. ಇದೀಗ ಈ ವಿಶ್ವಕಪ್​ನಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಲ್ಲದೆ ಟೀಮ್ ಇಂಡಿಯಾದ ಮುಂದಿನ ಗುರಿ 2027ರ ಏಕದಿನ ವಿಶ್ವಕಪ್.

ಸೌತ್ ಆಫ್ರಿಕಾ, ನಮೀಬಿಯಾ ಹಾಗೂ ಝಿಂಬಾಬ್ವೆ ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್‌ಗೆ ಸಿದ್ಧರಾಗಲು ಅವರು ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲು ಜಸ್​ಪ್ರೀತ್ ಬುಮ್ರಾ ನಿರ್ಧರಿಸಿದ್ದಾರೆ.


ಒಲಿಂಪಿಕ್ಸ್​ನಲ್ಲಿ ಕಣಕ್ಕೆ:

ಪ್ರಸ್ತುತ ಮಾಹಿತಿ ಪ್ರಕಾರ, ಜಸ್​ಪ್ರೀತ್ ಬುಮ್ರಾ ಮುಂದಿನ 18 ತಿಂಗಳುಗಳ ಕಾಲ ಭಾರತದ ಪರ ದ್ವಿಪಕ್ಷೀಯ ಟಿ20 ಸರಣಿಗಳನ್ನು ಆಡುವುದಿಲ್ಲ. ಆದಾಗ್ಯೂ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಆಡುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂಬರುವ ಒಲಿಂಪಿಕ್ಸ್​ ತಂಡದಲ್ಲಿ ಬುಮ್ರಾ ಅವರನ್ನು ಎದುರು ನೋಡಬಹುದು.

ನಿವೃತ್ತಿಯಿಲ್ಲ:

ಭಾರತ ಟಿ20 ತಂಡದಿಂದ 18 ತಿಂಗಳುಗಳ ಕಾಲ ಹೊರಗುಳಿದರೂ ಜಸ್​ಪ್ರೀತ್ ಬುಮ್ರಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುತ್ತಿಲ್ಲ. ಬದಲಿಗೆ ಕೇವಲ ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ಈ ವಿರಾಮ ಪಡೆಯುತ್ತಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.

ಐಪಿಎಲ್​ ಕಥೆ?

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಹೊರಗುಳಿದರೂ ಜಸ್​ಪ್ರೀತ್ ಬುಮ್ರಾ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಬುಮ್ರಾ ಈ ಬಾರಿಯ ಐಪಿಎಲ್​ ಟೂರ್ನಿಯಲ್ಲೂ ಕಣಕ್ಕಿಳಿಯಲಿದ್ದಾರೆ.
ಅಂದರೆ ಬುಮ್ರಾ ಬ್ರೇಕ್ ತೆಗೆದುಕೊಳ್ಳುತ್ತಿರುವುದು ಭಾರತ ತಂಡದ ಟಿ20 ಸರಣಿಗಳಿಂದ ಮಾತ್ರ. ಅಲ್ಲದೆ 2027ರ ಏಕದಿನ ವಿಶ್ವಕಪ್ ಹಾಗೂ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಬಳಿಕ ಅವರು ಮತ್ತೆ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.