ವೈಯುಕ್ತಿಕ ದಾಖಲೆ ಬೆನ್ನಟ್ಟಬೇಡಿ… ತಂಡದ ಹಿತ ಮುಖ್ಯ: ಗಂಭೀರ್ ಎಚ್ಚರಿಕೆ

ಟಿ20 ವಿಶ್ವಕಪ್ ಇತಿಹಾಸದಲ್ಲಿ ಆಟಗಾರನಾಗಿ ಮತ್ತು ಕೋಚ್ ಆಗಿ ವಿಶ್ವಕಪ್ ಗೆದ್ದ ಅಪರೂಪದ ಸಾಧನೆ ಮಾಡಿದ ಮೊದಲ ಮಾಜಿ ಕ್ರಿಕೆಟಿಗರಲ್ಲಿ ಒಬ್ಬರು ಗೌತಮ್ ಗಂಭೀರ್. 2007ರಲ್ಲಿ ನಡೆದ ಟಿ20 ವಿಶ್ವಕಪ್​ 2007ನಲ್ಲಿ ಚಾಂಪಿಯನ್ ಆದ ಭಾರತ ತಂಡದ ಸದಸ್ಯರಾಗಿದ್ದ ಗಂಭೀರ್, ಇದೀಗ ಕೋಚ್ ಆಗಿ ಟೀಮ್ ಇಂಡಿಯಾಗೆ ಟಿ20 ವಿಶ್ವಕಪ್ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಟೀಮ್ ಇಂಡಿಯಾ ಟಿ20 ವಿಶ್ವಕಪ್​ ಗೆಲುವಿನ ಅಲೆಯಲ್ಲಿ ತೇಲುತ್ತಿದೆ. ಈ ವಿಶ್ವಕಪ್ ಗೆದ್ದ ಬೆನ್ನಲ್ಲೇ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ನೀಡಿದ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಟಿ20 ವಿಶ್ವಕಪ್​ ಗೆದ್ದ ಖುಷಿಯಲ್ಲಿರುವ ಗಂಭೀರ್, ಭಾರತ ತಂಡದಲ್ಲಿರುವ ಆಟಗಾರರು ವೈಯುಕ್ತಿಕ ದಾಖಲೆಗಾಗಿ ಆಡುವುದನ್ನು ನಿಲ್ಲಿಸಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ವೈಯಕ್ತಿಕ ಮೈಲಿಗಲ್ಲುಗಳ ಯುಗ ಮುಗಿದಿದೆ. ತಮ್ಮ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಬೇಕು. ಶತಕ ಅಥವಾ ಅರ್ಧಶತಕಕ್ಕಾಗಿ ಆಡಿ ಸಂಭ್ರಮಿಸುವುದನ್ನು ನಿಲ್ಲಿಸಿ, ಟ್ರೋಫಿಗಳನ್ನು ಗೆದ್ದು ಸಂಭ್ರಮಿಸಬೇಕೆಂದು ಗಂಭೀರ್ ಸೂಚಿಸಿದ್ದಾರೆ.

ತಂಡದ  ಮುಖ್ಯ ಉದ್ದೇಶ ಟ್ರೋಫಿ ಗೆಲ್ಲುವುದೇ ಆಗಿರಬೇಕು. ಇದರ ಹೊರತಾಗಿ ವೈಯಕ್ತಿಕ ರನ್ ಗಳಿಸುವುದಲ್ಲ. ಆಟಗಾರರು ತಮ್ಮ ವೈಯಕ್ತಿಕ ಸ್ಕೋರ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ತಂಡದ ಮೊತ್ತವನ್ನು ಹೆಚ್ಚಿಸಲು ಆಡಬೇಕು ಎಂಬುದನ್ನು ಗೌತಮ್ ಗಂಭೀರ್ ಒತ್ತಿ ಹೇಳಿದ್ದಾರೆ.

ಇದಕ್ಕೆ ಸಂಜು ಸ್ಯಾಮ್ಸನ್ ಅವರ ಉದಾಹರಣೆಯನ್ನು ಗಂಭೀರ್ ಮುಂದಿಟ್ಟಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಸಂಜು ಸ್ಯಾಮ್ಸನ್ ಟೂರ್ನಿಯ ಕೊನೆಯ ಮೂರು ಪಂದ್ಯಗಳಲ್ಲಿ 97*, 89 ಮತ್ತು 89 ರನ್ ಗಳಿಸಿದ್ದರು.

ಸಂಜು ತಮ್ಮ ಶತಕಕ್ಕಾಗಿ ನಿಧಾನವಾಗಿ ಆಡಿದ್ದರೆ ತಂಡದ ಮೊತ್ತ 250 ದಾಟುತ್ತಿರಲಿಲ್ಲ.  ವೈಯಕ್ತಿಕ ದಾಖಲೆಗಿಂತ ತಂಡದ ವೇಗಕ್ಕೆ ಆದ್ಯತೆ ನೀಡಿದ್ದರಿಂದಲೇ ಭಾರತ ಗೆಲ್ಲಲು ಸಾಧ್ಯವಾಯಿತು. ಎಲ್ಲರಲ್ಲೂ ಇಂತಹ ಮನಸ್ಥಿತಿ ಮೂಡಬೇಕು.

ಸ್ವಾರ್ಥಕ್ಕಾಗಿ ಆಡುವುದನ್ನು ನಿಲ್ಲಿಸಿ ತಂಡದ ಗೆಲುವಿಗಾಗಿ ಶ್ರಮಿಸಬೇಕು. ಅಲ್ಲದೆ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಲೇಬೇಕು. ನನ್ನ ಕೆಲಸ ಬಲಿಷ್ಠ ತಂಡವನ್ನು ರೂಪಿಸುವುದಾಗಿದೆ. ಬದಲಾಗಿ ಸೂಪರ್ ಸ್ಟಾರ್​​ಗಳನ್ನು ಹುಟ್ಟು ಹಾಕುವುದಲ್ಲ ಎಂದು ಗೌತಮ್ ಗಂಭೀರ್ ಪುನರುಚ್ಚರಿಸಿದ್ದಾರೆ.

ನನ್ನ ಉದ್ದೇಶ ಸೂಪರ್ ಟೀಮ್ ರೂಪಿಸುವುದು. ಬದಲಾಗಿ ಸೂಪರ್ ಸ್ಟಾರ್​ಗಳನ್ನು ಹುಟ್ಟುಹಾಕುವುದಲ್ಲ. ಹೀಗಾಗಿ ವೈಯುಕ್ತಿಕ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಿ, ತಂಡದ ಹಿತಾಸಕ್ತಿಗಾಗಿ ಆಡಬೇಕು ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಖಡಕ್ ಸೂಚನೆ ನೀಡಿದ್ದಾರೆ.

ಇಲ್ಲಿ ಗೌತಮ್ ಗಂಭೀರ್ ವೈಯುಕ್ತಿಕ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಬೇಕೆಂದು ಒತ್ತಿ ಒತ್ತಿ ಹೇಳಿರುವ ಉದ್ದೇಶವೇನು? ಇದನ್ನು ಯಾರಿಗಾಗಿ ಹೇಳಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಅದರಲ್ಲೂ ಮುಂಬರುವ ಏಕದಿನ ವಿಶ್ವಕಪ್​​ಗೂ ಮುನ್ನ ಗಂಭೀರ್ ಇಂತಹದೊಂದು ಖಡಕ್ ಸೂಚನೆಗಳನ್ನು ಯಾರಿಗೆ ನೀಡಿದ್ದಾರೆ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.