ಮಾರ್ಚ್ 28ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ನಲ್ಲಿ ಮಹತ್ವದ ಬದಲಾವಣೆ ಕಂಡುಬರಲಿದೆ. ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ ಬಿಸಿಸಿಐ ಈ ಬಾರಿ ಐಪಿಎಲ್‌ನಲ್ಲಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಅದರಂತೆ ಸೀಸನ್-19ರಲ್ಲಿ ಒಟ್ಟು 84 ಪಂದ್ಯಗಳು ನಡೆಯಲಿದ್ದು, ಕಳೆದ ಸೀಸನ್‌ಗಳಿಗಿಂತ ಹೆಚ್ಚಿನ ಪಂದ್ಯಗಳನ್ನು ಅಭಿಮಾನಿಗಳು ವೀಕ್ಷಿಸುವ ಅವಕಾಶ ಸಿಗಲಿದೆ ಎಂದು ವರದಿಗಳು ತಿಳಿಸಿವೆ.


ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ಮಹತ್ವದ ಬದಲಾವಣೆಯಾಗಲಿರುವುದು ಖಚಿತವಾಗಿದೆ. ಅದು ಕೂಡ ಪಂದ್ಯಗಳ ಸಂಖ್ಯೆಗಳ ಹೆಚ್ಚಳದೊಂದಿಗೆ ಎಂಬುದು ವಿಶೇಷ. ಅಂದರೆ ಐಪಿಎಲ್ 2026 ರಿಂದ ಹೆಚ್ಚುವರಿ 10 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಮುಂದಾಗಿದೆ.

ಈ ಹಿಂದೆಯೇ ಐಪಿಎಲ್ ಪಂದ್ಯಗಳ ಹೆಚ್ಚಳದ ಬಗ್ಗೆ ಬಿಸಿಸಿಐ ಚರ್ಚಿಸಿತ್ತು. ಅದರಂತೆ ಐಪಿಎಲ್ 2025 ಮತ್ತು 2026 ರಲ್ಲಿ 84 ಪಂದ್ಯಗಳನ್ನು ಆಯೋಜಿಸಲು ಪ್ಲ್ಯಾನ್ ರೂಪಿಸಲಾಗಿತ್ತು. ಅಲ್ಲದೆ 2027 ರಲ್ಲಿ ಐಪಿಎಲ್ ಪಂದ್ಯಗಳ ಸಂಖ್ಯೆಯನ್ನು 94 ಕ್ಕೇರಿಸಲು ಚಿಂತಿಸಲಾಗಿತ್ತು.
ಅಷ್ಟೇ ಅಲ್ಲದೆ 2027 ರಿಂದ ಐಪಿಎಲ್ ಅನ್ನು ಲೀಗ್ ಮಾದರಿಯಲ್ಲಿ ಆಯೋಜಿಸಲಾಗುತ್ತದೆ. ಅಂದರೆ ಇಲ್ಲಿ ಪ್ರತಿ ತಂಡಗಳು 18 ಪಂದ್ಯಗಳನ್ನಾಡಲಿದೆ. 9 ಪಂದ್ಯಗಳು ಹೋಮ್ ಗ್ರೌಂಡ್ನಲ್ಲಿ ನಡೆದರೆ, ಉಳಿದ 9 ಪಂದ್ಯಗಳು ಅವೇ ಮೈದಾನದಲ್ಲಿ ಜರುಗಲಿದೆ. ಈ ಮೂಲಕ ಲೀಗ್ ಹಂತದಲ್ಲಿ ಪ್ರತಿ ತಂಡಗಳು 18 ಪಂದ್ಯಗಳನ್ನಾಡಲಿದೆ.
ಒಟ್ಟಿನಲ್ಲಿ ಐಪಿಎಲ್ ಸೀಸನ್-19 ರಲ್ಲಿ 84 ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಪ್ರೇಕ್ಷಕರಿಗೆ ದೊರೆಯಲಿದೆ. ಅಲ್ಲದೆ ಮರುವರ್ಷವೇ, ಅಂದರೆ 2027 ರಿಂದ 94 ಪಂದ್ಯಗಳಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಸಾಕ್ಷಿಯಾಗುವುದು ಬಹುತೇಕ ಖಚಿತವಾಗಿದೆ.
