ಎಂಇಎಸ್ ಭಯೋತ್ಪಾದನಾ ಸಂಘಟನೆ; ಬೆಳಗಾವಿಯಲ್ಲಿ ಕರವೇ ಆಕ್ರೋಶ

ಬೆಳಗಾವಿ: ರಾಜ್ಯೋತ್ಸವದ ದಿನದಂದು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಕರಾಳ ದಿನಾಚರಣೆ ಆಚರಿಸಲು ಅನುಮತಿ ಕೊಡಬಾರದೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಇಂದು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದ ದಿನ ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಕನ್ನಡದ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಕರಾಳ ದಿನಾಚರಣೆ ಆಚರಿಸುತ್ತಿದೆ. ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ದ್ರೋಹ ಬಗೆಯುವ ಕರಾಳ ದಿನಾಚರಣೆಗೆ ಈ ವರ್ಷ ಯಾವುದೇ ಕಾರಣಕ್ಕೂ ಬೆಳಗಾವಿ ನಗರ ಪೊಲೀಸ್ ಇಲಾಖೆಯು ಅನುಮತಿ ನೀಡಬಾರದು. ಅನುಮತಿ ನೀಡುವದಿಲ್ಲ ಎಂದು ಸುಳ್ಳು ಹೇಳಿ ಪೊಲೀಸ್ ಇಲಾಖೆಯು ಮಧ್ಯರಾತ್ರಿ ಅನುಮತಿ ನೀಡುವ ಮೂಲಕ ಕನ್ನಡಿಗರಿಗೆ ಅನ್ಯಾಯ ಮಾಡುತ್ತಾ ಬಂದಿರುತ್ತದೆ. ಈ ಕುರಿತು ನಾವು ರಾಜ್ಯದ ಗೃಹ ಮಂತ್ರಿಗಳಿಗೂ ಮತ್ತು ಮುಖ್ಯಮಂತ್ರಿಗಳಿಗೂ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.