ಬಾಬುಸಾಪಾಳ್ಯದಲ್ಲಿ ಕಟ್ಟಡ ಕುಸಿದು ದುರಂತ ಬೆನ್ನಲ್ಲೇ ಬೆಂಗಳೂರಲ್ಲಿ ವಾಲಿದ ಮತ್ತೊಂದು ಕಟ್ಟಡ

ಬೆಂಗಳೂರು, ಅ.24: ನಗರದ ಬಾಬುಸಾಪಾಳ್ಯದಲ್ಲಿ ಕಟ್ಟಡ ಕುಸಿದು ದೊಡ್ಡ ದುರಂತವೇ ಸಂಭವಿಸಿತ್ತು. ಇದುವರೆಗೂ 8 ಜನ ಕಾರ್ಮಿಕರು ಸಾವನ್ನಪ್ಪಿದ್ದರೆ, 8 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ಸಿಲಿಕಾನ್​ ಸಿಟಿಯಲ್ಲಿ 6 ಅಂತಸ್ತಿನ ನಿರ್ಮಾಣ ಹಂತದ ಮತ್ತೊಂದು ಕಟ್ಟಡ ವಾಲಿದ್ದು, ಬಲಿ ಪಡೆಯಲು ಸಿದ್ಧವಾಗಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿದೆ.

ನಗರದ ಹೊರಮಾವು ಪ್ರದೇಶದ ನಂಜಪ್ಪ ಗಾರ್ಡನ್​ನಲ್ಲಿರುವ ಪುಟ್ಟಪ್ಪ ಮಾಲೀಕತ್ವದ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಬಲಭಾಗಕ್ಕೆ ವಾಲಿದೆ. 12*30 ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಸದ್ಯ ವಾಲಿರುವುದರಿಂದ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಶುರುವಾಗಿದೆ.

ಬಿಬಿಎಂಪಿ ಸೂಚನೆ ಬೆನ್ನಲ್ಲೇ ಕಟ್ಟಡ ತೆರವಿಗೆ ಮುಂದಾದ ಮಾಲೀಕ

ಗ್ರೌಂಡ್​ ಫ್ಲೋರ್ ಸೇರಿದಂತೆ ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಮಾಲೀಕ ಪುಟ್ಟಪ್ಪ ಅನುಮತಿ ಪಡೆದಿದ್ದ. ಆದರೆ ನಿಯಮ‌ ಮೀರಿ ಆರಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ನೋಟಿಸ್​ಗೆ ಉತ್ತರ ನೀಡಿರುವ ಮಾಲೀಕ ಕಟ್ಟಡ ಸ್ವಂತ ಖರ್ಚಿನಲ್ಲಿ ತೆರವು ಮಾಡೋದಾಗಿ ಪತ್ರ ಬರೆದಿದ್ದಾರೆ. ಸದ್ಯ ವಾಲಿದ ಕಟ್ಟಡ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಬಾಣಸವಾಡಿ ಉಪ ವಿಭಾಗದ ಎಸಿಪಿ ಉಮಾಶಂಕರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.