ಬೆಳಗಾವಿ: ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕೆ ರೈತರು ಬೆಳಗಾವಿ ಎಸಿ ಕಚೇರಿಯ ಕಂಪ್ಯೂಟರ್, ಪ್ರಿಂಟರ್ ಹೊತ್ತೊಯ್ದ ಘಟನೆ ನಡೆದಿದೆ. ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿನ ಉಪವಿಭಾಗಧಿಕಾರಿ ಕಚೇರಿಯಲ್ಲಿ ಘಟನೆ ನಡೆದಿದೆ. ನ್ಯಾಯಾಲಯದ ಆದೇಶದ ಮೇರೆಗೆ ಎಸಿ ಪೀಠೋಪಕರಣಗಳನ್ನು ರೈತರು ಜಪ್ತಿ ಮಾಡಿದ್ದಾರೆ.
ಬೆಳಗಾವಿ ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿಗಾಗಿ ರೈತರು ಕಳೆದ 2008ರಲ್ಲಿ 270 ಎಕರೆ ಜಮೀನು ಕೊಟ್ಟಿದ್ದರು. ಪ್ರತಿ ಎಕರೆಗೆ ಸರ್ಕಾರದಿಂದ ಕೇವಲ 2 ಲಕ್ಷ ಪರಿಹಾರ ನೀಡುವಂತೆ ಆದೇಶ ಹೊರಡಿಸಲಾಗಿತ್ತು. ಹೆಚ್ಚಿನ ಪರಿಹಾರ ಕೋರಿ 2011ರಲ್ಲಿ ರೈತರು ಕೋರ್ಟ್ ಮೊರೆಹೋಗಿದ್ದರು. ಬೆಳಗಾವಿಯ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ರೈತರು ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರತಿ ಗುಂಟೆಗೆ ₹40 ಸಾವಿರದಂತೆ ಪರಿಹಾರ ನೀಡುವಂತೆ 2018ರಲ್ಲಿಯೇ ಆದೇಶ ಹೊರಡಿಸಿತ್ತು.
ಇತ್ತ ಸಕಾಲಕ್ಕೆ ಪರಿಹಾರ ಕೊಡದಿದ್ದಾಗ ರೈತರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ರೈತರಿಗೆ ತಕ್ಷಣವೇ ನ್ಯಾಯಯುತ ಪರಿಹಾರ ನೀಡುವಂತೆ 2021ರಲ್ಲಿ ಮತ್ತೊಮ್ಮೆ ಕೋರ್ಟ್ ಆದೇಶ ಹೊರಡಿಸಿತ್ತು. ಆಗಲೂ ಪರಿಹಾರ ನೀಡದಿದ್ದರಿಂದ ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿನ ವಸ್ತು ಜಪ್ತಿ ಮಾಡುವಂತೆ ಕೋರ್ಟ್ ಸೂಚನೆ ನೀಡಿತ್ತು.
ಜಮೀನು ಕೊಟ್ಟ ಇನ್ನೂ 20 ರೈತರಿಗೆ 8 ಕೋಟಿ ಪರಿಹಾರ ಬಾಕಿ ಇದೆ. ಪರಿಹಾರ ಸಿಗದ ಹಿನ್ನೆಲೆ ನ್ಯಾಯವಾದಿಗಳ ಸಮ್ಮುಖದಲ್ಲೇ ಎಸಿ ಕಚೇರಿಯಲ್ಲಿನ ವಸ್ತುಗಳನ್ನು ರೈತರು ಹೊತ್ತೊಯ್ದರು. ಕಂಪ್ಯೂಟರ್, ಕುರ್ಚಿಗಳು, ಪ್ರಿಂಟರ್ ಸೇರಿದಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಯಿತು.