ಆಂಬ್ಯುಲೆನ್ಸ್ ಬರುವಷ್ಟರಲ್ಲೇ ಮಗು ಸಾವು, 4 ದಿನ ಆಸ್ಪತ್ರೆಯಲ್ಲಿಟ್ಟುಕೊಂಡಿದ್ದ ವೈದ್ಯನ ವಿರುದ್ಧ ಆಕ್ರೋಶ

ಬೆಳಗಾವಿ, ಜು.03: ವೈದ್ಯರ ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ, ಸಂಬಂಧಿಕರು ಸೇರಿಕೊಂಡು ಆಸ್ಪತ್ರೆಯ ಪರಿಕರಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್‌ನ ಬ್ಯಾಳಿ ಕಾಟಾ ಬಳಿಯಿರುವ ಕಡಾಡಿ ಆಸ್ಪತ್ರೆಯಲ್ಲಿ ನಡೆದಿದೆ. ಡಾ.ಮಹಾಂತೇಶ್ ಕಡಾಡಿ ಎಂಬುವವರಿಗೆ ಸೇರಿದ ಖಾಸಗಿ ಆಸ್ಪತ್ರೆ ಇದಾಗಿದ್ದು, ಶಿವಾನಂದ ನಿಂಗಪ್ಪ ಬಡಬಡಿ ಎಂಬುವವರ 7ತಿಂಗಳ ಮಗು ಸಾವನ್ನಪ್ಪಿದ ಹಿನ್ನಲೆ, ರೊಚ್ಚಿಗೆದ್ದ ಸಂಬಂಧಿಕರು ಆಸ್ಪತ್ರೆ ವಸ್ತುಗಳನ್ನು ಹಾಳು ಮಾಡಿದ್ದಾರೆ.

ಅನಾರೋಗ್ಯ ಹಿನ್ನಲೆ ನಾಲ್ಕು ದಿನದ ಹಿಂದೆ ಆಸ್ಪತ್ರೆಗೆ ಮಗು ದಾಖಲು

ಹೌದು, ಅನಾರೋಗ್ಯ ಕಾರಣ ನಾಲ್ಕು ದಿನದ ಹಿಂದೆ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ನಿನ್ನೆ(ಜು.02) ತಡರಾತ್ರಿ ಮಗು ಸೀರಿಯಸ್ ಆಗಿದೆ. ಈ ಹಿನ್ನಲೆ ಬೆಳಗ್ಗೆ ಆ್ಯಂಬುಲೆನ್ಸ್ ತರಿಸಿ ಬೇರೆ ಆಸ್ಪತ್ರೆಗೆ ಮಗುವನ್ನು ದಾಖಲಿಸಿ ಎಂದು ವೈದ್ಯರು ಹೇಳಿದ್ದರು. ಅದರಂತೆ ವೈದ್ಯರ ಸೂಚನೆಯ ಮೇರೆಗೆ ಮಗುವಿನ ಪೋಷಕರು ಆ್ಯಂಬುಲೆನ್ಸ್ ಸಹ ತರಿಸಿದ್ದರು. ಆದರೆ, ಆ್ಯಂಬುಲೆನ್ಸ್ ಬರುವಷ್ಟರಲ್ಲಿ ಮಗು ತೀರಿ ಹೋಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಆಕ್ರೋಶಗೊಂಡ ಪೋಷಕರು

ಇನ್ನು ಯಾವಾಗ ಮಗು ತೀರಿ ಹೋಗಿದೆ ವೈದ್ಯರು ಎಂದು ಹೇಳಿದರೂ, ಆಕ್ರೋಶಗೊಂಡ ಪೋಷಕರು ಹಾಗೂ ಅವರ ಸಂಬಂಧಿಕರು ವೈದ್ಯರ ವಿರುದ್ದ ರೊಚ್ಚಿಗೆದ್ದು ಆಸ್ಪತ್ರೆಯ ಪರಿಕರಗಳನ್ನು ಒಡೆದು ಹಾಕಿ ವೈದ್ಯ ಕಡಾಡಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಗೋಕಾಕ್ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.