ಸಿನಿಮೀಯ ರೀತಿ ನಡೆಯಿತು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯನ ಅಪಹರಣ

ಬೆಳಗಾವಿ: ಕಿರಾತಕರ ಗ್ಯಾಂಗ್‌ವೊಂದು ಸಿನಿಮೀಯ ರೀತಿಯಲ್ಲಿ ರಾತೋರಾತ್ರಿ ಪಟ್ಟಣ ಪಂಚಾಯತ್ ಸದಸ್ಯನ ಅಪಹರಣ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರಿನ ಚೌಕಿಮಠ ಬಳಿ ಘಟನೆ ನಡೆದಿದೆ.

ಕಿತ್ತೂರು ಪಟ್ಟಣ ಪಂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿ ಆಗಿತ್ತು. ಬಿಜೆಪಿ ಸದಸ್ಯ ನಾಗರಾಜ್ ಅಸುಂಡಿ ಎಂಬಾತನನ್ನು ಕಾಂಗ್ರೆಸ್‌ ಸದಸ್ಯರು ಕಿಡ್ನ್ಯಾಪ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಈ ಸಂಬಂಧ ಅಶೋಕ್ ಮಾಳಗಿ, ಬಸವರಾಜ್ ಸಂಗೊಳ್ಳಿ, ಸುರೇಶ ಕಡೆಮನಿ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈ ಮೂವರು ಸೇರಿ ನನ್ನ ಮಗನನ್ನು ಕಿಡ್ನ್ಯಾಪ್ ಮಾಡಿದ್ದಾರೆಂದು ನಾಗರಾಜ್ ತಂದೆ ಬಸವರಾಜ್ ಅಸುಂಡಿ ಅವರು ಕಿತ್ತೂರು ಠಾಣೆಗೆ ದೂರು ನೀಡಿದ್ದಾರೆ. ಸೆಪ್ಟಂಬರ್ 3 ರಂದು ಕಿತ್ತೂರು ಪಟ್ಟಣ ಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ ನಿಗದಿಯಾಗಿತ್ತು.

ಕಿತ್ತೂರು ಪಟ್ಟಣ ಪಂಚಾಯತ್‌ ಬಿಜೆಪಿಯ 9 ಹಾಗೂ ಕಾಂಗ್ರೇಸ್ ನ 5 ಪಕ್ಷೇತರ 4 ಸದಸ್ಯರ ಬಲ‌ ಹೊಂದಿದೆ. ಈ ವೇಳೆ ಬಿಜೆಪಿ ಸದಸ್ಯನ ಕಿಡ್ನ್ಯಾಪ್ ಮಾಡಿ ಕಾಂಗ್ರೆಸ್‌ ಸದಸ್ಯರು ಅಧ್ಯಕ್ಷ ಸ್ಥಾನಕ್ಕೇರುವ ಪ್ಲಾನ್ ಮಾಡಿದ್ದರು. ಸದ್ಯ ನಾಗರಾಜ್‌ನನ್ನು ಅಪಹರಿಸಿ ಅಜ್ಞಾತ ಸ್ಥಳದಲ್ಲಿ ಇರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದೂರು ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಬೆಳಗಾವಿ ಪೊಲೀಸರು ಕಿಡ್ನ್ಯಾಪ್‌ ಮಾಡಿದವರಿಗೆ ತಲಾಶ್‌ ನಡೆಸಲು ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ ಅವರು ಮೂರು ತಂಡಗಳ ರಚನೆ ಮಾಡಿದ್ದಾರೆ.