ಹೊನ್ನಾವರ: ಇಲ್ಲಿನ ಶರಾವತಿ ಸೇತುವೆ ಮೇಲೆ ಗ್ಯಾಸ್ ಟ್ಯಾಂಕರ್ ಚಾಲಕ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ವಾಹನ ಚಲಾಯಿಸಿದ ಪರಿಣಾಮ ಎದುರಿನಿಂದ ಹೋಗುತ್ತಿದ್ದ ಲಗೇಜ್ ಆಟೋಗೆ ಹಿಂಬದಿಯಿಂದ ಡಿಕ್ಕಿಪಡಿಸಿದ ಘಟನೆ ನಡೆದಿದೆ.
ಭಟ್ಕಳ ಕಡೆಯಿಂದ ಹೊನ್ನಾವರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುತ್ತಿರುವಾಗ ಗೂಡ್ಸ್ ರಿಕ್ಷಾಗೆ ಹಿಂಬದಿಯಿಂದ ಗ್ಯಾಸ್ ಟ್ಯಾಂಕರ್ ಡಿಕ್ಕಿಯಾಗಿದೆ. ಪರಿಣಾಮ ರಿಕ್ಷಾದಲ್ಲಿದ್ದ ದಂಪತಿಗಳಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳು ಪಟ್ಟಣದ ಬಂದರರೋಡ್ ನಿವಾಸಿಗಳಾದ ಗಜಾನನ ನಾಯ್ಕ ಹಾಗೂ ಆತನ ಪತ್ನಿ ಚಂದ್ರಾವತಿ ನಾಯ್ಕ ಎಂದು ಗುರುತಿಸಲಾಗಿದೆ.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಉತ್ತರ ಪ್ರದೇಶ ಮೂಲದ ಲವಕುಶ ಕುಮಾರ ಎಂಬಾತ ಅಪಘಾತಪಡಿಸಿದ ಟ್ಯಾಂಕರ್ ಚಾಲಕನಾಗಿದ್ದಾನೆ. ಈ ಕುರಿತು ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.