ಬೆಂಗಳೂರು, ಆಗಸ್ಟ್ 06: ನಗರದಲ್ಲಿ ಕಳೆದ ರಾತ್ರಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಮಳೆಯ ನಡುವೆಯೂ ನಗರದ ಮಾನ್ಯತಾ ಟೆಕ್ಪಾರ್ಕ್ ಬಳಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಬೆಂಕಿಗಾಹುತಿಯಾಗಿರುವ ಘಟನೆ ನಾಗವಾರ – ಹೆಬ್ಬಾಳ ಸರ್ವಿಸ್ ರಸ್ತೆಯಲ್ಲಿ ನಡೆದಿದೆ. ರಾತ್ರಿ ಸುರಿದ ಮಳೆಯಿಂದ ಸರ್ವಿಸ್ ರಸ್ತೆಯಲ್ಲಿ ನೀರು ತುಂಬಿಕೊಂಡಿತ್ತು. ಇದೇ ಮಾರ್ಗದಲ್ಲಿ ಬರುತ್ತಿದ್ದ ಬಸ್ ನಡುರಸ್ತೆಯಲ್ಲೇ ಹೊತ್ತಿ ಉರಿದಿದೆ.
ಎಲೆಕ್ಟ್ರಿಕ್ ಬಸ್ನಲ್ಲಿ ಮೊದಲು ಹೊಗೆ ಕಾಣಿಸಿಕೊಂಡಿದೆ. ಕೂಡಲೆ ಚಾಲಕ ಬಸ್ ಅನ್ನು ನಿಲ್ಲಿಸಿದ್ದಾನೆ. ಪ್ರಯಾಣಿಕರು ಬಸ್ಸಿಂದ ಕೆಳಗಿಳಿದ್ದಾರೆ. ಅನಂತರ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅಗ್ನಿಶಾಮಕದಳದ ವಾಹನ ಸ್ಥಳಕ್ಕೆ ತಲುಪುವ ಮೊದಲೇ ಬಸ್ ಬೆಂಕಿಗಾಹುತಿಯಾಗಿತ್ತು. ಬಸ್ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಅಗ್ನಿ ಅವಘಡದಿಂದ ನಾಗವಾರ ಜಂಕ್ಷನ್ನಿಂದ ಲುಂಬಿನಿ ಗಾರ್ಡನ್ವರೆಗೆ ಸುಮಾರು 3 ಕಿಮೀ. ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿತ್ತು. ಟ್ರಾಫಿಕ್ನಲ್ಲಿ ಸಿಲುಕಿದ ಅಗ್ನಿಶಾಮಕ ಸಿಬ್ಬಂದಿ ಅವಘಡ ನಡೆದ ಸ್ಥಳಕ್ಕೆ ತೆರಳಲು ಆಗದೆ ಪರದಾಡಿದರು. ಇದರಿಂದ ಘಟನಾ ಸ್ಥಳಕ್ಕೆ ತೆರಳಲು ತಡವಾಯ್ತು.