ಸಚಿವ ಮಂಕಾಳ ವೈದ್ಯರಿಂದ ಸಹಾಯದ ಭರವಸೆ: ಜನಸ್ಪಂದನದಲ್ಲಿ ಕಣ್ಣೀರನ್ನು ಒರೆಸಿದ ಕ್ಷಣಗಳು

ಹೊನ್ನಾವರ:
ಪಟ್ಟಣದ ಸಚಿವರ ಕಾರ್ಯಾಲಯದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಅವರು ಶನಿವಾರ ಜನಸ್ಪಂದನಾ ಕಾರ್ಯಕ್ರಮದ ಮೂಲಕ ನೂರಾರು ಜನರ ಅಹವಾಲು ಸ್ವೀಕರಿಸಿದರು‌.

ಜನತೆ ವಿವಿಧ ರೀತಿಯ ಸಹಾಯ, ಸಹಕಾರ ಹಾಗೂ ಸಮಸ್ಯೆಗಳನ್ನು ಕೇಳಿಕೊಂಡು ಸಚಿವರೊಂದಿಗೆ ಮಾತನಾಡಿದರು. ಮಕ್ಕಳು, ವಿಕಲಚೇತನರು, ವಯೋವೃದ್ದರೊಂದಿಗೆ ಸಚಿವರು ಪ್ರೀತಿಯಿಂದ ಮಾತನಾಡಿಸುತ್ತಾ ಅವರ ಮನವಿ ಆಲಿಸಿದರು. ಖರ್ವಾ ಗ್ರಾಮದ ಕೊಳಗದ್ದೆಯಲ್ಲಿರುವ ಬಿಸಿಎಂ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯವನ್ನು ಬೇರೆ ವಿದ್ಯಾರ್ಥಿ ನಿಲಯಕ್ಕೆ ಸೇರ್ಪಡೆಗೊಳಿಸದಂತೆ ಹಾಗೂ ಸದ್ಯ ಇರುವ ವಿದ್ಯಾರ್ಥಿಗಳ ಸಂಖ್ಯಾಬಲ ಹೆಚ್ಚಿಸಿಕೊಡುವ ಕುರಿತು ಖರ್ವಾ ಶ್ರೀ ಸಿದ್ದಿವಿನಾಯಕ ಫ್ರೌಢಶಾಲೆಯ ಶಿಕ್ಷಕರು, ನಾಥಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು, ಊರ ನಾಗರಿಕರು ಸಚಿವರಿಗೆ ಮನವಿ ಸಲ್ಲಿದರು. ಹಲವಾರು ವಿದ್ಯಾರ್ಥಿಗಳು ಈ ಹಿಂದಿನ ಆನೇಕ ವರ್ಷಗಳಿಂದ ಈವರೆಗೂ ವ್ಯಾಸಂಗ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ಹಾಸ್ಟೆಲ್‌ ವಿದ್ಯಾರ್ಥಿ ಸಂಖ್ಯಾ ಮಿತಿ 50 ಇದ್ದು, ನಂತರ ವಿದ್ಯಾರ್ಥಿ ಸಂಖ್ಯಾ ಮಿತಿ 30ಕ್ಕೆ ಕಡಿತಗೊಳಿಸಲಾಗಿರುತ್ತದೆ. ವಿದ್ಯಾರ್ಥಿಗಳ ಸಂಖ್ಯಾಬಲ ಹೆಚ್ಚಳ ಮಾಡಿಕೊಡುವಂತೆ ಪ್ರತಿ ವರ್ಷ ತಾಲೂಕ ಬಿಸಿಎಂ ಕಚೇರಿಯಿಂದ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುತ್ತಾ ಇದ್ದರೂ ಸಹ ವಿದ್ಯಾರ್ಥಿಗಳ ಸಂಖ್ಯಾಬಲ ಹೆಚ್ಚಳವಾಗಿರುವುದಿಲ್ಲ.ಈ ವಸತಿ ನಿಲಯವು ನಮ್ಮ ಶಾಲೆಗೆ ಪ್ರವೇಶ ಪಡೆದು ವ್ಯಾಸಂಗ ಮಾಡಲು ದೂರದ ಊರಿಂದ ಬರುವ ಬಡ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಈ ವಸತಿ ನಿಲಯವನ್ನು ಮತ್ತೊಂದು ವಸತಿ ನಿಲಯದೊಂದಿಗೆ ಸೇರ್ಪಡೆಗೊಳಿಸುವ ಪ್ರಸ್ತಾಪವು ಇಲಾಖಾ ಹಂತದಲ್ಲಿ ನಡೆದಿರುವುದು ಗಮನಕ್ಕೆ ಬಂದಿದೆ. ಈ ರೀತಿ ಸೇರ್ಪಡೆಯಾದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದರ ಜೊತೆಗೆ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯು ಕಡಿಮೆಯಾಗಲಿದೆ ಎಂದು ಶಿಕ್ಷಕರು ಸಚಿವರಲ್ಲಿ ವಿನಂತಿಸಿದರು. ಹಾಸ್ಟೇಲ್ ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದಲ್ಲಿ ಸೇರ್ಪಡೆಗೊಳಿಸುವ ಪ್ರಸ್ತಾಪ ಕೈಬೀಡಲು ಹೇಳುತ್ತೇನೆ. ನನ್ನ ಹಂತದಲ್ಲಾಗುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಇನ್ನು ಅಗ್ನಿ ಅವಘಡದಿಂದ ಮನೆ ಹಾನಿಗೊಳಗಾದ ದತ್ತಾತ್ರೇಯ ಈಶ್ವರ ನಾಯ್ಕ ಕುಟುಂಬ ಸಚಿವರಲ್ಲಿ ಮನವಿ ಸಲ್ಲಿಸಿ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಕೋರಿದರು. ಮನೆಯಲ್ಲಿ ದೇವರಿಗೆ ಪೂಜಿಸಿ ಇಟ್ಟ ಆರತಿಯ ಬೆಂಕಿಯಿಂದ ಮನೆಯೆಲ್ಲ ಹೊತ್ತಿ ಮನೆಯ ಎಲ್ಲಾ ಸಾಮಾನುಗಳು ಎಲ್ಲಾ ನಾಶವಾಗಿದೆ. ಇದರಿಂದ ನಮ್ಮ ಕುಟುಂಬಕ್ಕೆ ಈಗ ಉಳಿಯಲು ಸಹ ಜಾಗ ಇರುವುದಿಲ್ಲ, ಹಾಗೆ ಹಾಕಿಕೊಳ್ಳಲು ಬಟ್ಟೆ ಬರೆಗಳು ಸಹ ಇಲ್ಲವಾಗಿದೆ. ನನಗೆ ಹಾಗೂ ನನ್ನ ಪತ್ನಿ ಇಬ್ಬರಿಗೂ ಮಾತು ಬರುವುದಿಲ್ಲ, ಹಾಗೂ ಕಿವಿಯು ಕೇಳಿಸುವುದಿಲ್ಲ. ಆದ್ದರಿಂದ ನಮ್ಮ ಜೀವನ ತುಂಬಾ ಕಷ್ಟವಾಗಿದೆ. ಅಂಗವಿಕಲರಾದ ನಮಗೆ ಯಾವುದಾದಾರು ರೀತಿಯಲ್ಲಿ ಸರ್ಕಾರದಿಂದ ಸಿಗುವ ಸಹಾಯಧನವನ್ನು ಹಾಗೂ ತಮ್ಮ ಕೈಲಾದಷ್ಟು ಸಹಾಯಧನವನ್ನು ನೀಡಿ ಸಹಕರಿಸಬೇಕು ಎಂದು ಲಿಖಿತ ಮನವಿ ಸಲ್ಲಿಸಿದರು. ಪತಿ,ಪತ್ನಿ ಇಬ್ಬರು ಮುಖರಾಗಿದ್ದರಿಂದ ಕಷ್ಟಹೇಳಲಾಗದೇ ಕಣ್ಣೀರಿಟ್ಟ ಮನಕಲಕುವ ಘಟನೆ ನಡೆಯಿತು. ಇದರಿಂದ ಸಚಿವರು ಒಮ್ಮೆ ಭಾವುಕರಾಗಿ, ಈಶ್ವರ ನಾಯ್ಕರ 5ವರ್ಷದ ಪುಟ್ಟ ಬಾಲಕಿಯೊಂದಿಗೆ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯಲ್ಲೇ ನಿನಗೆ ಶಿಕ್ಷಣ ನೀಡಿ, ನಿನ್ನ ಶಿಕ್ಷಣದ ಸಂಪೂರ್ಣ ಖರ್ಚುವೆಚ್ಚ ಭರಿಸುವೆ ಎಂದು ವೈಯಕ್ತಿವಾಗಿ 25,000 ಧನಸಹಾಯ ನೀಡಿ ಮಾನವೀಯತೆ ಮೆರೆದರು. ಇನ್ನು ಹೆಚ್ಚಿನ ಸಹಾಯ ಒದಗಿಸಿಕೊಡುವುದಾಗಿ ಕುಟುಂಬಕ್ಕೆ ಭರವಸೆ ನೀಡಿದರು. ಅವರಿಗೆ ಮನೆನಿರ್ಮಿಸಿಕೊಡಲು ಸೂಕ್ತ ಜಾಗ ಹುಡುಕಿ ಎಂದು ಸ್ಥಳೀಯ ಪ್ರಮುಖರಿಗೆ ತಿಳಿಸಿ, ಎಲ್ಲರು ಮನೆ ನಿರ್ಮಿಸಿಕೊಡೋಣ ಎಂದರು‌.

ಈ ಬಾರಿ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನತಾದರ್ಶನದಲ್ಲಿ ಪಾಲ್ಗೊಂಡು ತಮ್ಮ ಬೇಡಿಕೆ ಸಲ್ಲಿಸಿರುವುದು ಕಂಡುಬಂತು. ತುರ್ತುಅನಾರೋಗ್ಯದಿಂದ ನೆರೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು, ನೆರೆಹೊರೆಯವರಿಂದ ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಿಲ್ ತುಂಬಿದ್ದರು. ಸರ್ಕಾರದಿಂದ ನೆರವಿಗಾಗಿ ಸಚಿವರಲ್ಲಿ ಅಳಲು ತೊಡಿಕೊಂಡರು. ಸಿಎಂ ಪರಿಹಾರ ನಿಧಿಯ ಜೊತೆಗೆ ವೈಯಕ್ತಿಕವಾಗಿಯು ತಮ್ಮ ಕಷ್ಟಕ್ಕೆ ಆರ್ಥಿಕವಾಗಿ ಸ್ಪಂದಿಸುವುದಾಗಿ ಹೇಳುವ ಮೂಲಕ ಸಚಿವರು ತಮ್ಮ ಮಾನವೀಯತೆ ಮೆರೆದರು.

ಜನಸ್ಪಂದನದಲ್ಲಿ ಜನರಿಂದ ಬಂದ ಕೆಲವಷ್ಟು ಮನವಿ ಹಾಗೂ ಬೇಡಿಕೆಗಳಿಗೆ ಸ್ಥಳದಲ್ಲಿಯೇ ಸಚಿವರು ಸ್ಪಂದಿಸಿದರು.ಇನ್ನೂ ಕೆಲವಷ್ಟನ್ನು ಶೀಘ್ರವಾಗಿ ಮಾಡಿಕೊಡುವ ಭರವಸೆ ನೀಡಿದರು. ಶಾಸಕನಾಗಿದ್ದಾಗಲು ಜನರ ಜೊತೆ ಇದ್ದೇನೆ, ಸಚಿವನಾದ ಮೇಲು ಜನರ ಜೊತೆ ಇರುತ್ತಿದ್ದೆನೆ. ಜನರ ಕಷ್ಟಕ್ಕೆ ಸ್ಪಂದಿಸುವ ಸಲುವಾಗಿಯೆ ಜನಸ್ಪಂದನಾ ನಡೆಸುವುದು. ಯಾವುದೇ ಕಾರಣಕ್ಕು ವಿಚಲಿತರಾಗಬೇಡಿ, ಗೊಂದಲಕ್ಕೊಳಗಾಗಬೇಡಿ ಎಂದು ಜನತೆಗೆ ಅಭಯ ಹಸ್ತ ನೀಡಿದರು.