ರೂಪಾಯಿ ಇತಿಹಾಸದ ಕನಿಷ್ಠ ಮಟ್ಟಕ್ಕೆ; 94ಕ್ಕೆ ಕುಸಿತ – ಕಾರಣವೇನು?

ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಇತಿಹಾಸದಲ್ಲೇ ಮೊದಲ ಬಾರಿಗೆ 94ರ ಮಟ್ಟಕ್ಕಿಂತ ಕೆಳಗೆ ಇಳಿದು ದಾಖಲೆ ಮಟ್ಟ ತಲುಪಿದೆ. ಸೋಮವಾರ 93.83ರಲ್ಲಿ ವಹಿವಾಟು ಆರಂಭಿಸಿದ ರೂಪಾಯಿ, ಕೆಲವೇ ಹೊತ್ತಿನಲ್ಲಿ 94ರ ಗಡಿಯನ್ನು ದಾಟಿ ಮತ್ತಷ್ಟು ಕುಸಿತ ಕಂಡಿತು. ಇದು ರೂಪಾಯಿಯ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮಟ್ಟವಾಗಿದೆ.

ಡಾಲರ್ ಬಲಿಷ್ಠವಾಗಿರುವುದು, ವಿದೇಶಿ ಹೂಡಿಕೆಗಳ ಹೊರಹರಿವು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಏರಿಕೆಯಾಗಿರುವುದು ರೂಪಾಯಿ ಕುಸಿತಕ್ಕೆ ಪ್ರಮುಖ ಕಾರಣಗಳಾಗಿ ಪರಿಣಮಿಸಿದ್ದಾಗಿ ತಜ್ಞರು ತಿಳಿಸಿದ್ದಾರೆ.

ನವದೆಹಲಿ :

 ಅಮೆರಿಕನ್ ಡಾಲರ್ ಎದುರು ಭಾರತದ ಕರೆನ್ಸಿಯಾದ ರುಪಾಯಿಯ ದುರ್ಬಲ ಸಾಧನೆ ಮುಂದುವರಿದಿದೆ. ಡಾಲರ್​ಗೆ ರುಪಾಯಿ ಮೌಲ್ಯ 94 ರು ಮಟ್ಟಕ್ಕಿಂತ ಕೆಳಗೆ ಕುಸಿದಿದೆ. ಈ ಮಟ್ಟಕ್ಕೆ ರುಪಾಯಿ ಇಳಿದ್ದು ಇತಿಹಾಸದಲ್ಲಿ ಇದೇ ಪ್ರಥಮ. ಇವತ್ತು ಸೋಮವಾರ (ಮಾ. 23) ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ 93.83ರಲ್ಲಿ ಆರಂಭಗೊಂಡಿತು. ನಂತರದ ವಹಿವಾಟಿನಲ್ಲಿ ಅದು 94ರ ಮಟ್ಟ ದಾಟಿ ಹೋಯಿತು.

ರುಪಾಯಿ ಮೌಲ್ಯ ಕುಸಿತಕ್ಕೆ ಏನು ಕಾರಣಗಳು?

ಕಚ್ಛಾ ತೈಲ ಬೆಲೆಗಳು ಸತತವಾಗಿ ಹೆಚ್ಚಿನ ಮಟ್ಟದಲ್ಲಿ ಇರುವುದು ಭಾರತದ ಆಮದು ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿದೆ. ಆಮದು ಹೆಚ್ಚಾದಾಗ ಡಾಲರ್​ಗೆ ಬೇಡಿಕೆ ಹೆಚ್ಚುತ್ತದೆ. ಪರಿಣಾಮವಾಗಿ ಡಾಲರ್ ಎದುರು ರುಪಾಯಿ ಮೌಲ್ಯ ಸಹಜವಾಗಿ ಕುಂದಿದೆ.

ರುಪಾಯಿ ಮೌಲ್ಯ ಕುಸಿತಕ್ಕೆ ಅಮೆರಿಕನ್ ಡಾಲರ್ ಪ್ರಬಲಗೊಂಡಿರುವುದಷ್ಟೇ ಅಲ್ಲ, ಇನ್ನೂ ಕೆಲ ಕಾರಣಗಳಿವೆ. ಭಾರತೀಯ ಮಾರುಕಟ್ಟೆಗಳಿಂದ ವಿದೇಶೀ ಹಣದ ಹೊರಹರಿವು ಸತತವಾಗಿ ನಡೆಯುತ್ತಿದೆ. ಹಾಗೆಯೇ, ಬಾಂಡ್ ಯೀಲ್ಡ್​ಗಳೂ ಕೂಡ ಹೆಚ್ಚಿನ ಮಟ್ಟದಲ್ಲಿವೆ. ಈ ಅಂಶಗಳು ರುಪಾಯಿ ಮೇಲೆ ಒತ್ತಡ ಹಾಕಿವೆ ಎಂಬುದು ತಜ್ಞರ ಅನಿಸಿಕೆ.

ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆದಾರರು ಅಥವಾ ಎಫ್​ಪಿಐಗಳು ಭಾರತದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದ್ದ ಷೇರುಗಳು, ಬಾಂಡ್​ಗಳು ಇತ್ಯಾದಿಯನ್ನು ಮಾರುತ್ತಿರುವುದು ಹೆಚ್ಚಿದೆ. ಹೀಗೆ ಮಾರುವಾಗ ರುಪಾಯಿಯನ್ನು ಡಾಲರ್​ಗಳಾಗಿ ಪರಿವರ್ತಿಸುತ್ತಾರೆ. ಹೀಗಾಗಿ, ಅಮೆರಿಕನ್ ಡಾಲರ್​ಗೆ ಬೇಡಿಕೆ ಹೆಚ್ಚಿ, ರುಪಾಯಿ ಮೌಲ್ಯ ಕುಸಿಯಲು ಕಾರಣವಾಗುತ್ತದೆ.