ಹೊನ್ನಾವರ:
ತಾಲ್ಲೂಕಿನ ನಗರಬಸ್ತಿಕೇರಿ ಪಂಚಾಯತಿ ವ್ಯಾಪ್ತಿಯ ಖಂಡೋಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ನವನೀತ್ ವಿನಾಯಕ ನಾಯ್ಕ ತನ್ನ ಪ್ರತಿಭೆಯಿಂದ ಗಮನ ಸೆಳೆದಿದ್ದಾನೆ. ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ನಡೆಯುವ ರಾಷ್ಟ್ರ ಮಟ್ಟದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಯಾದ ಜವಾಹರಲಾಲ್ ನೆಹರು ನವೋದಯ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ 30ನೇ ಸ್ಥಾನ ಪಡೆದು ನವೋದಯ ಶಾಲೆಗೆ ಆಯ್ಕೆಯಾಗಿರುವುದು ಅತ್ಯಂತ ಶ್ಲಾಘನೀಯ ಸಾಧನೆ.

ಈ ವಿಷಯವನ್ನು ಶಾಲೆಯ ಮುಖ್ಯ ಶಿಕ್ಷಕರಾದ ಲಕ್ಷ್ಮಣ ಪಟಗಾರ ತಿಳಿಸಿದ್ದಾರೆ. ನವನೀತ್‌ನ ಸಾಧನೆಗೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಶಿಕ್ಷಕರು, ಪಾಲಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಖಂಡೋಡಿ ಗ್ರಾಮದ ಕ್ಯಾನಕ್ಕಿ ಮಜರೆಯಲ್ಲಿ ವಾಸಿಸುವ ಕೃಷಿಕ ಕುಟುಂಬದ ಪುತ್ರನಾದ ನವನೀತ್, ವಿನಾಯಕ ನಾಗಪ್ಪ ನಾಯ್ಕ ಮತ್ತು ಸವಿತಾ ನಾಯ್ಕ ದಂಪತಿಯ ಮಗ. ದಿನವೂ 3–4 ಕಿಲೋಮೀಟರ್ ದೂರ ನಡೆದು ಶಾಲೆಗೆ ಹಾಜರಾಗುತ್ತಿದ್ದ ಈ ವಿದ್ಯಾರ್ಥಿ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು ಪರಿಶ್ರಮಪೂರ್ವಕವಾಗಿ ಅಧ್ಯಯನ ಮಾಡುತ್ತಿದ್ದನು. ಶಿಕ್ಷಕರ ಮಾರ್ಗದರ್ಶನ ಹಾಗೂ ತನ್ನ ದೃಢಸಂಕಲ್ಪದಿಂದ ಈ ಸಾಧನೆ ಸಾಧ್ಯವಾಗಿದ್ದು, ಹಳ್ಳಿಯ ಮಕ್ಕಳಿಗೂ ದೊಡ್ಡ ಪ್ರೇರಣೆಯಾಗಿದ್ದಾನೆ.
ತನ್ನ ಪರಿಶ್ರಮದಿಂದ ತಂದೆ-ತಾಯಿಗಳಿಗೆ, ಶಾಲೆಗೆ ಹಾಗೂ ಊರಿಗೆ ಕೀರ್ತಿಯನ್ನು ತಂದಿರುವ ನವನೀತ್ ನಾಯ್ಕನ ಸಾಧನೆ ನಿಜಕ್ಕೂ ಹೆಮ್ಮೆಯ ಸಂಗತಿ.
