ಉತ್ತರ ಕನ್ನಡದಲ್ಲಿ ಮಂಗನಬಾವು ಕಾಟ: ಮುಂಡಗೋಡ ವಸತಿ ಶಾಲೆಯ 200ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕಿನ ಭೀತಿ

ಕಾರವಾರ, ನವೆಂಬರ್ 23 :  ಉತ್ತರಕನ್ನಡ ಜಿಲ್ಲೆಯ ಮುಂಡಗೋಡದ ಬೃಂದಾವನ ವಸತಿ ಬಡಾವಣೆಯಲ್ಲಿನ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮಂಗನಬಾವು ಕಾಯಿಲೆಯ ಅಬ್ಬರ ಜೋರಾಗಿದೆ. ಇಲ್ಲಿ‌ನ 6 ರಿಂದ 10 ನೇ ತರಗತಿ ಮಕ್ಕಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಶೀತ, ಜ್ವರ, ಕೆಮ್ಮು ಹಾಗೂ ಮುಖದ ಬಾವು ಕಾಣಿಸಿಕೊಂಡಿತ್ತು. ತಕ್ಷಣ ಮಕ್ಕಳನ್ನು ಆಸ್ಪತ್ರೆ ಕರೆದೋಯ್ದು‌ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಕಳೆದ ಎರಡು ದಿನದ ಹಿಂದೆ ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ಇದೀಗ ಮತ್ತಷ್ಟು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 75 ಕ್ಕೆ ಏರಿಕೆಯಾಗಿದೆ. ಸದ್ಯ ಸೋಂಕಿತ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ. ಆದರೆ ವಸತಿ ಶಾಲೆಯಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದು, ಇವರಿಗೆಲ್ಲ ಸೋಂಕಿನ ಆತಂಕ ಶುರುವಾಗಿದೆ.

ಸೋಂಕಿನ ಲಕ್ಷಣಗಳು ಹೆಚ್ಚಾದ ಮಕ್ಕಳನ್ನು ಪಾಲಕರನ್ನು ಕರೆಸಿ ಅವರ ಜತೆಗೆ ಮನೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಭೇಟಿ ಪರಿಶೀಲನೆ ನಡೆಸಿದ್ದು, ಸೋಂಕಿತರನ್ನು ಮುಂಡಗೋಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗನಬಾವು ಹರಡುವುದು ಹೇಗೆ?

ಮಂಗನಬಾವು ರೋಗವು ನೀರು ಮತ್ತು ಸೋಂಕಿತರ ಸಂಪರ್ಕದಿಂದ ಹರಡುತ್ತದೆ. ಹೀಗಾಗಿ ಮತ್ತಷ್ಟು ವಿದ್ಯಾರ್ಥಿಗಳು ಸೋಂಕಿತರಾಗುವ ಆತಂಕ ಉಂಟಾಗಿದೆ.

ಮಂಗನಬಾವು ಲಕ್ಷಣಗಳೇನು?

ಆರಂಭದಲ್ಲಿ ಶೀತ, ಜ್ವರ, ಕೆಮ್ಮು ಕಾಣಿಸಿಕೊಂಡು ಬಳಿಕ ಮುಖದ ಮೇಲೆ ಬಾವು ಕಾಣಿಸುತ್ತದೆ. ಸದ್ಯ ಮಕ್ಕಳಿಗೂ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಕ್ಕಳಲ್ಲಿ ಕಾಣಿಸಿಕೊಂಡ ಮಂಗಬಾವು ಇದೀಗ ಮತ್ತಷ್ಟು ಗಂಭೀರವಾಗತೊಡಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ರೋಗಕ್ಕೆ ಸೂಕ್ತ ಚಿಕಿತ್ಸೆ ಕೊಡಿಸುವುದರ ಜತೆಗೆ, ರೋಗ ಮತ್ತಷ್ಟು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.