ಸಂಡೂರಿನಲ್ಲಿ ಕಾಂಗ್ರೆಸ್​ ಅಭ್ಯರ್ಥಿಗೆ ಮುನ್ನಡೆ: ಶ್ರೀ ಕನಕ ದುರ್ಗಮ್ಮ ಆಶೀರ್ವಾದ ಪಡೆದ ಅನ್ನಪೂರ್ಣ ತುಕಾರಾಂ

ಸಂಡೂರು: ಸಂಡೂರು ಉಪಚುನಾವಣೆ ಮತ ಎಣಿಕೆ 17ನೇ ಸುತ್ತಿನ ಬಳಿಕ, ಕಾಂಗ್ರೆಸ್​ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ಧ 9105 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 88727, ಹಾಗೂ ಬಿಜೆಪಿ ಅಭ್ಯರ್ಥಿ 79622 ಮತಗಳನ್ನು ಗಳಿಸಿದ್ದಾರೆ.

ಇಂದು ಸಂಡೂರು ಉಪಚುನಾವಣೆ ಫಲಿತಾಂಶ ಹಿನ್ನೆಲೆ ಅನ್ನಪೂರ್ಣ ತುಕಾರಾಂ ಅವರು ಪತಿ ಈ. ತುಕಾರಾಂ ಅವರ ಶ್ರೀ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ಆಶೀರ್ವಾದ ಪಡೆದರು. ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ದಂಪತಿ ಚುನಾವಣಾ ಗೆಲುವಿಗಾಗಿ ಪ್ರಾರ್ಥಿಸಿದರು. ಈ ವೇಳೆ ಅನ್ನಪೂರ್ಣ ಅವರಿಗೆ ಬೆಂಬಲಿಗರು ಸಾಥ್​ ನೀಡಿದರು.

ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅನ್ನಪೂರ್ಣ, “ಶ್ರೀ ಕನಕ ದುರ್ಗಮ್ಮ ತಾಯಿಯ ಆಶೀರ್ವಾದ ಪಡೆದಿದ್ದೇನೆ. ಗೆಲುವು ನಮ್ಮದೇ ಆಗಲಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಕಾಂಗ್ರೆಸ್​ನ ಭದ್ರಕೋಟೆಯಾಗಿರುವ ಸಂಡೂರ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್​ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎನ್ನುವ ವಿಶ್ವಾಸ ನನ್ನಲ್ಲಿದೆ. ಫಲಿತಾಂಶ ತೀವ್ರ ಹಣಾಹಣಿಯಲ್ಲಿ ಸಾಗುತ್ತಿದೆ. ಆದರೆ ಅಂತಿಮವಾಗಿ ಗೆಲುವು ಕಾಂಗ್ರೆಸ್​ನದ್ದಾಗಲಿದೆ. ತಾಯಿಯ ಬಳಿ ಕ್ಷೇತ್ರದ ಎಲ್ಲ ಜನರನ್ನು ಚೆನ್ನಾಗಿಟ್ಟಿರು ಹಾಗೂ ನನಗೂ ಹೆಚ್ಚಿನ ಶಕ್ತಿ ದಯಪಾಲಿಸು ಎಂದು ಬೇಡಿಕೊಂಡಿದ್ದೇನೆ. ಇನ್ನೂ ಕೆಲವು ಸುತ್ತುಗಳ ಮತ ಎಣಿಕೆ ಬಾಕಿ ಇದೆ. ಏನಾಗುತ್ತದೆ ಎಂದು ಕಾದು ನೋಡೋಣ” ಎಂದು ಹೇಳಿದರು.

ಕಾಂಗ್ರೆಸ್​ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆ ಬೆಂಬಲಿಗರು ಹಾಗೂ ಕಾಂಗ್ರೆಸ್​ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.